ಆಂಧ್ರ ಪ್ರದೇಶ: ಎರಡೂ ತೆಲುಗು ರಾಷ್ಟ್ರಗಳಲ್ಲಿ 4-5 ದಿನಗಳಿಂದ ಕೇವಲ ನಟ ನಂದಮೂರಿ ಬಾಲಕೃಷ್ಣ ನಟಿಸಿರುವ 'ಅಖಂಡ' ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಡಿ. 2ರಂದು 'ಅಖಂಡ' ತೆರೆಕಂಡಿದ್ದು, ಡಿ.5 ರವೆರೆಗೆ ಬರೀ ದಕ್ಷಿಣದಲ್ಲೇ 50 ಕೋಟಿ ರೂಪಾಯಿ ಗಳಿಸಿದೆ ಎಂದು ಬಾಕ್ಸ್ ಆಫೀಸ್ ವರದಿಗಳು ತಿಳಿಸಿವೆ. ಸಿನಿಮಾ ಒಳ್ಳೆಯ ಗಳಿಕೆ ಮಾಡಿದರೂ ಕೇವಲ ಬಾಲಕೃಷ್ಣ ಅಭಿಮಾನಿಗಳಿಗೆ ಮಾತ್ರ ಇಷ್ಟವಾಗಿದೆ ಎಂಬ ವಿಮರ್ಶೆ ಸಹ ಕೇಳಿಬಂದಿದೆ. ಇನ್ನು, ಈ ಸಿನಿಮಾ ನೋಡಲು ವಿಶಾಖಪಟ್ಟಣದಲ್ಲಿ ಬಂಗಾರರಾಜು ಥೀಯೆಟರ್ಗೆ ಅಘೋರಿಗಳು ಬಂದಿದ್ದರು. ಕಾರಣ, ಚಿತ್ರದಲ್ಲಿ ಬಾಲಯ್ಯ ಅಘೋರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಹೊಸ ಲುಕ್ ಮೂಲಕವೇ ಚರ್ಚೆಗೆ ಗ್ರಾಸವಾಗಿದ್ದಾರೆ.
'ಅಖಂಡ' ಸಿನಿಮಾ ನೋಡಲೆಂದೇ ಮೊದಲ ಬಾರಿಗೆ ಚಿತ್ರಮಂದಿರಕ್ಕೆ ಬಂದಿದ್ದೇವೆ ಎಂದ ಅಘೋರಿಗಳು, ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಚಿತ್ರದಲ್ಲಿ ಬಾಲಯ್ಯನ ಶಿವತಾಂಡವ ಕಂಡು ಬೆರಗಾದ ಅಘೋರಿಗಳು, ನಂತರ ನಟನ ಅಭಿಮಾನಿಗಳ ಜೊತೆ ಸೇರಿ ಶಿವನಾಮಸ್ಮರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಸಿನಿಮಾದ ಗಳಿಕೆಯನ್ನು ಮತ್ತು ಯಶಸ್ಸನ್ನು ಬಾಲಕೃಷ್ಣ ಅಭಿಮಾನಿಗಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಬಾಲಕೃಷ್ಣ ಅವರ ಅಭಿಮಾನಿ ಮತ್ತು ಜನಪ್ರಿಯ ಸಿನಿಮಾ ಪ್ರದರ್ಶಕ, ವಿತರಕ ಜಸ್ತಿ ರಾಮಕೃಷ್ಣ ಸತ್ಯಮಾಲಾ ನಿಧನರಾಗಿರುವುದು ಎಲ್ಲರಿಗೆ ನೋವುಂಟು ಮಾಡಿದೆ.
ಅಂದಹಾಗೆ, ರಾಮಕೃಷ್ಣ ಸತ್ಯಮಾಲಾ ಅವರು ಪೂರ್ವ ಗೋದಾವರಿ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಕೂಡ ಆಗಿದ್ದು, 'ಅಖಂಡ' ಸಿನಿಮಾ ನೋಡುತ್ತಿರುವಾಗಲೆ ಥಿಯೇಟರ್ನಲ್ಲೇ ಮೆದುಳಿನ ಸ್ಟ್ರೋಕ್ಗೆ ಒಳಗಾಗಿದ್ದಾರೆ. ಚಿತ್ರಮಂದಿರದಲ್ಲಿರುವವರು ರಾಮಕೃಷ್ಣ ಸತ್ಯಮಾಲಾ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ರಾಜಮಂಡ್ರಿಯಲ್ಲಿ ನಾಮವರಂ ವಿಎಸ್ ಮಹಲ್ ಚಿತ್ರಮಂದಿರ ಕಟ್ಟಿದ್ದ ನಂತರ ರಾಮಕೃಷ್ಣ ಸತ್ಯಮಾಲಾ ಅವರು ಸಿನಿಮಾ ವಿತರಣೆ ಆರಂಭಿಸಿದ್ದರು. ಇನ್ನು, ಇವರು ಜೆಕೆ ಹೋಟೆಲ್ ಗ್ರೂಪ್ನ ಮಾಲೀಕರು ಸಹ ಆಗಿದ್ದಾರೆ. ರಾಮಕೃಷ್ಣ ಸತ್ಯಮಾಲಾ ನಟ ನಂದಮೂರಿ ಬಾಲಕೃಷ್ಣ ಅವರ ಡೈಹಾರ್ಡ್ ಅಭಿಮಾನಿಯಾಗಿದ್ದರು.
ಪತ್ನಿ ಸಿರೀಶಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ರಾಮಕೃಷ್ಣ ಸತ್ಯಮಾಲಾ. 'ಅಖಂಡ' ಸಿನಿಮಾದಲ್ಲಿ ಮಾಸ್ ದೃಶ್ಯಗಳು ಹೆಚ್ಚು ಇದ್ದು, ಅಸಾಧ್ಯ ಎಂಬ ಅಂಶಗಳನ್ನು ಬಾಲಕೃಷ್ಣ ಈ ಸಿನಿಮಾದಲ್ಲಿ ಮಾಡಿ ತೋರಿಸಿದ್ದಾರೆ. ತೊಡೆಗೆ ತೆಂಗಿನ ಕಾಯಿ ಹೊಡೆದುಕೊಳ್ಳುವ, ಅಸಾಧ್ಯ ಎನ್ನುವಂತಹ ಫೈಟ್ ದೃಶ್ಯಗಳು ಸದ್ಯ ಎಲ್ಲರ ಮನೆಮಾತಾಗಿವೆ. ಕೆಲವರು 'ಅಖಂಡ' ಸಿನಿಮಾದ ದೃಶ್ಯಗಳನ್ನು ಟ್ರೋಲ್ ಮಾಡಿದರೆ, ಉಳಿದ ಬಾಲಕೃಷ್ಣ ಅವರ ಅಭಿಮಾನಿಗಳು ದೃಶ್ಯಗಳನ್ನು ಹಾಡಿ ಹೊಗಳಿದ್ದಾರೆ. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಲಭಿಸುತ್ತಿರುವ ಈ ಸಮಯದಲ್ಲಿ ಅಭಿಮಾನಿ ಹಾಗೂ ವಿತರಕ ಒಬ್ಬರು ನಿಧನರಾಗಿರುವುದು ಎಲ್ಲರಿಗೂ ದುಃಖ ತಂದಿದೆ.