ಈ ರಾಜನ ಬಯೋಪಿಕ್​ ಮಾಡಲು ಹಿಂದೇಟು: ಅಜಯ್ ದೇವಗನ್ ಬಳಿಕ ಅಕ್ಷಯ್​ ಕಡೆಯಿಂದ ನಕಾರ

collage
Published on

ಮುಂಬೈ: ಬಾಲಿವುಡ್​ನಲ್ಲಿ ಸಾಕಷ್ಟು ಬಯೋಪಿಕ್​ಗಳಾಗುತ್ತಿವೆ. ಅದರಲ್ಲೂ ಐತಿಹಾಸಿಕ ಹಿನ್ನೆಲೆಯುಳ್ಳ ಕಥೆಗಳಂತೂ ನಿರ್ಮಾಪಕರ ಅಚ್ಚುಮೆಚ್ಚು. ಆದರೆ, ಈ ರಾಜನ ಕಥೆ ಮಾತ್ರ ಬಾಲಿವುಡ್​ನ ಸ್ಟಾರ್ ನಟರಿಗೆ ಇಷ್ಟವಾಗುತ್ತಿಲ್ಲ. ನಾನೊಲ್ಲೆ ನಾನೊಲ್ಲೆ ಎಂದು ಹಿಂಜರಿಯುತ್ತಿದ್ದಾರೆ.

ಹೌದು, ಹಿಂದು ರಾಜ ಸುಹೇಲ್​ದೇವ್ ರಾಜಭರ್​ ಅವರ ಜೀವನವನ್ನು ಬಾಲಿವುಡ್​ನಲ್ಲಿ ಸಿನಿಮಾ ಮಾಡಬೇಕೆಂದು ಅಶ್ವಿನ್ ವರ್ದೆ ನಿರ್ಧರಿಸಿದ್ದರು. ಅದರಂತೆ ಬಾಲಿವುಡ್​ನ ಹಲವು ಸ್ಟಾರ್ ನಟರಿಗೆ ಅಪ್ರೋಚ್​ ಸಹ ಮಾಡಲಾಗಿತ್ತು. ಆದರೆ, ಒಬ್ಬರ ಹಿಂದೊಬ್ಬರಂತೆ ಈ ಕಥೆಯನ್ನು ನಿರಾಕರಿಸುತ್ತಿದ್ದಾರೆ.

ಈ ಮೊದಲು ಅಜಯ್​ ದೇವಗನ್​ಗೆ ಈ ಸಿನಿಮಾದ ಸಲುವಾಗಿ ಇಡೀ ತಂಡ ಭೇಟಿ ಮಾಡಿ ಕಥೆ ಹೇಳಿ ಬಂದಿತ್ತು. ಅವರು ತಿರಸ್ಕ್ರರಿಸಿದ ಬಳಿಕ ಅದೇ ಕಥೆ ಅಕ್ಷಯ್ ಅವರ ಬಳಿ ಬಂದಿತ್ತು. ಅವರೂ ಸಹ ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವಂತೆ ಅಕ್ಷಯ್​ ಹೇಳಿದ ಹಿನ್ನೆಲೆಯಲ್ಲಿ, ಅದು ನಿರ್ಮಾಪಕರಿಗೆ ಸರಿಯೆನಿಸಿಲ್ಲ. ಅಷ್ಟೇ ಅಲ್ಲ, ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಬಿಜಿಯಾಗಿರುವುದರಿಂದ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಬೇರೆಯವರ ಹುಡುಕಾಟದಲ್ಲಿದ್ದಾರೆ. ಶೀಘ್ರದಲ್ಲಿ ದೊಡ್ಡ ಹೆಸರನ್ನೇ ಘೋಷಣೆ ಮಾಡಲಿದ್ದಾರಂತೆ ನಿರ್ಮಾಪಕರು.

ಅಂದಹಾಗೆ ಸುಹೇಲ್​ದೇವ್​ ಶ್ರಾವಸ್ತಿಯ ರಾಜ. ಶ್ರಾವಸ್ತಿ ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿದೆ. ಸುಹೇಲ್​ದೇವ್​ 1034ರಲ್ಲಿ ಘಾಜಿ ಸಯ್ಯದ್ ಸಲಾರ್ ಅಸೂದ್​ನನ್ನು ಯುದ್ಧದಲ್ಲಿ ಹತ್ಯೆ ಮಾಡಿದ್ದ. ಈ ಹಿನ್ನೆಲೆಯನ್ನೇ ಅಶ್ವಿನ್ ವರ್ದೆ ಸಿನಿಮಾ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net