ರಾಮರಸದಲ್ಲಿ ಹೆಬಾ : 10 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಬಂದ ‘ಅಧ್ಯಕ್ಷ’ ಖ್ಯಾತಿಯ ನಟಿ

hebha 1
Published on

ಬೆಂಗಳೂರು: ಕನ್ನಡದ ‘ಅಧ್ಯಕ್ಷ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದವರು ಮುಂಬೈ ಮೂಲದ ನಟಿ ಹೆಬಾ ಪಟೇಲ್. ಬಳಿಕ ತೆಲುಗು, ತಮಿಳು ಚಿತ್ರರಂಗದಲ್ಲಿ ಬಿಜಿಯಾದರು. ತೆಲುಗಿನ ‘ಅಲಾ ಇಲಾ’, ‘ಭೀಷ್ಮ’, ‘ದ ಗ್ರೇಟ್ ಇಂಡಿಯಾನ್ ಸೂಯಿಸೈಡ್’ ಸೇರಿ ತಮಿಳಿನ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ, 10 ವರ್ಷಗಳ ಬಳಿಕ ಹೆಬಾ ಮತ್ತೆ ಚಂದನವನಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ‘ಮೈತ್ರಿ’, ‘ಜಟ್ಟ’ ಖ್ಯಾತಿಯ ಬಿ.ಎಂ.ಗಿರಿರಾಜು ನಿರ್ದೇಶನದ ಹಾಗೂ ‘ಬಿಗ್‌ಬಾಸ್ ಕನ್ನಡ-10’ರ ವಿಜೇತ ಕಾರ್ತಿಕ್ ಮಹೇಶ್ ಅಭಿನಯದ ‘ರಾಮರಸ’ ಚಿತ್ರದಲ್ಲಿ ಬಹುಮುಖ್ಯಪಾತ್ರದಲ್ಲಿ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಮವಾರ ನಟಿಯ ಫಸ್ಟ್‌ಲುಕ್ ಬಿಡುಗಡೆಯಾಗಲಿದೆ.

ಈ ಬಗ್ಗೆ ನಿರ್ಮಾಪಕ ಗುರು ದೇಶಪಾಂಡೆ ಖಚಿತಪಡಿಸಿದ್ದು, ‘10 ವರ್ಷಗಳ ಬಳಿಕ ‘ರಾಮರಸ’ ಚಿತ್ರದ ಮೂಲಕ ಹೆಬಾ ಕನ್ನಡಕ್ಕೆ ಬರುತ್ತಿದ್ದಾರೆ. ಇಲ್ಲಿ ಇವರ ಪಾತ್ರ ಪ್ರಮುಖವಾಗಿದ್ದು, ‘ಭ್ರಮರಿ’ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಪಾತ್ರದ ಬಗ್ಗೆ ಸದ್ಯ ಇಷ್ಟೇ ಮಾಹಿತಿ. ಉಳಿದಂತೆ ಮುಂದೆ ಎಲ್ಲ ಹಂಚಿಕೊಳ್ಳುವೆ. ‘ರಾಮರಸ’ ಚಿತ್ರವು ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದೆ. ಎರಡು ಸಾಂಗ್ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಶುರು ಮಾಡಿಕೊಂಡಿದೆ. ಡಬ್ಬಿಂಗ್ ಕಾರ್ಯ ಪೂರ್ಣಗೊಳಿಸಲಾಗುತ್ತಿದೆ. ಉತ್ತಮ ಗುಣಮಟ್ಟದ ವಿಎ್ಎಕ್ಸ್ ಚಿತ್ರಕ್ಕೆ ಇರಲಿದೆ. ಅಲ್ಲದೇ ಈ ಚಿತ್ರದಲ್ಲಿ ಉತ್ತರ ಹಾಗೂ ದಕ್ಷಿಣ ಭಾರತದ ಹಲವಾರು ಕಲಾವಿದರು ಅಭಿನಯಿಸುತ್ತಿದ್ದು, ದೊಡ್ಡ ತಾರಾ ಬಳಗವನ್ನೇ ನೋಡಬಹುದು. 12ನೇ ಶತಮಾನದ ಒಂದು ಪೌರಾಣಿಕ ಕಥೆಯನ್ನು ಹಾಗೂ ಇಂದಿನ ಆಧುನಿಕ ಕಾಲಘಟ್ಟದ ಒಂದು ಕಥೆಯ ಮೂಲಕ ‘ರಾಮರಸ’ ನಿರೂಪಿಸಲಾಗುತ್ತಿದೆ. ಎರಡು ಕಾಲಘಟ್ಟಗಳ ಸೇತುವೆಯಾಗಿ ಈ ಚಿತ್ರ ಮೂಡಿಬರಲಿದೆ’ ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net