

‘ಷಡ್ಯಂತ್ರ’, ‘ರೆಡ್ ಬ್ಲೂ ಐಸ್’ ಚಿತ್ರ ನಿರ್ವಿುಸಿ, ನಿರ್ದೇಶಿಸಿದ್ದ ನಿರ್ದೇಶಕ ರಾಜೇಶ್ ಮೂರ್ತಿ ಇದೀಗ ‘ಡೆಡ್ಲಿ ಅಫೇರ್’ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ಸದ್ದಿಲ್ಲದೆ ಶೂಟಿಂಗ್ ಮುಗಿಸಿದ್ದು, ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.
‘ವಿವಾಹೇತರ ಸಂಬಂಧಗಳ ಕುರಿತ ಕಥೆ ಆಧಾರಿತ ಸಿನಿಮಾ ಇದು.
ಬಹುತೇಕ ಗಂಡಸರು ಈ ರೀತಿಯ ಸಂಬಂಧ ಇಟ್ಟುಕೊಂಡಿರುತ್ತಾರೆ. ಕೊನೆಗೆ ಅದರಿಂದ ಬಿಡಿಸಿಕೊಳ್ಳಲು ಆಗದೆ, ಹೆಂಗಸರಿಂದ ವಂಚನೆಗೆ ಒಳಗಾಗುತ್ತಾರೆ. ಆಗ ಅವರು ಅನುಭವಿಸುವ ಸಮಸ್ಯೆ, ಈ ರೀತಿಯ ಸಂಬಂಧಗಳಿಂದ ಆಗುವ ಅನಾಹುತಗಳ ಬಗ್ಗೆ ಸಿನಿಮಾ ತಿಳಿಸುತ್ತದೆ’ ಎನ್ನುತ್ತಾರೆ ನಿರ್ದೇಶಕರು.
ಈ ಹಿಂದಿನ ಚಿತ್ರಗಳಲ್ಲಿ ಗಂಡ-ಹೆಂಡತಿ ಕುರಿತು ಹಾಗೂ ಸೈಕಲಾಜಿಕಲ್ ಕಥಾನಕ ಒಳಗೊಂಡ ಸಿನಿಮಾಗಳನ್ನು ಮಾಡಿದ್ದ ರಾಜೇಶ್ ಮೂರ್ತಿ, ಈಗ ‘ಡೆಡ್ಲಿ ಅಫೇರ್’ ಅನಾಹುತಗಳ ಬಗ್ಗೆ ತಿಳಿಸಲು ಮುಂದಾಗಿದ್ದಾರೆ. ‘ಓಂ ಶ್ರೀ ಸಿನಿಮಾ’ ಬ್ಯಾನರ್ ಅಡಿ ನಿರ್ಮಾಣ ಆಗಿರುವ ಈ ಸಿನಿಮಾಗೆ ಕಥೆ, ಚಿತ್ರಕಥೆ, ನಿರ್ದೇಶನದ ಜತೆಗೆ ನಿರ್ಮಾಣ ಕೂಡ ಮಾಡಿದ್ದಾರೆ ರಾಜೇಶ್ ಮೂರ್ತಿ.
ಸ್ವಪನ್ಕೃಷ್ಣ-ಗುಂಜನ್ ಅರಸ್ ನಾಯಕ-ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಸೋಮಣ್ಣ, ರಾಜೇಶ್ ಮಿಶ್ರಾ, ಮಾಸ್ಟರ್ ವಿಶೃತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿತಿನ್ ಕುಮಾರ್ ಸಂಗೀತ ನಿರ್ದೇಶನ, ಆರ್.ವಿನೋದ್ ಛಾಯಾಗ್ರಹಣ, ಸತೀಶ್ ಸಂಕಲನ ಚಿತ್ರಕ್ಕಿದೆ.