ಆದ್ಯಾ ಫ್ಯಾಮಿಲಿ ಕೂತು ನೋಡುವ ಥ್ರಿಲ್ಲರ್ ಕಹಾನಿ

adya kannada feb 20
Published on

ಬೆಂಗಳೂರು: ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳೆಂದರೆ ಭಯ, ರಕ್ತ ಎಲ್ಲವೂ ಇರುತ್ತದೆ. ಜತೆಗೆ ಥ್ರಿಲ್ಲರ್ ಸಿನಿಮಾಗಳನ್ನು ಕುಟುಂಬ ಸಮೇತ ನೋಡಲಾಗುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತದೆ. ಆದರೆ ಇಂದು ಬಿಡುಗಡೆಯಾಗುತ್ತಿರುವ ಕೆ ಎಂ ಚೈತನ್ಯ ನಿರ್ದೇಶನದ ‘ಆದ್ಯಾ’ ಸಿನಿಮಾವನ್ನು ಫ್ಯಾಮಿಲಿ ಸಮೇತ ನೋಡಬಹುದಂತೆ, ಇದನ್ನು ಸ್ವತಃ ನಿರ್ದೇಶಕರೇ ಹೇಳಿದ್ದಾರೆ.

ವರ್ಷದ ಹಿಂದೆ ಸುದ್ದಿಯಾಗಿದ್ದ ಸಿನಿಮಾ ಇದ್ದಕ್ಕಿದ್ದ ಹಾಗೆ ರಿಲೀಸ್ ಹಂತಕ್ಕೆ ಬಂದು ನಿಂತಿದೆ. ಈ ಹೊತ್ತಿನಲ್ಲಿ ನಿರ್ದೇಶಕರು ನಮ್ಮೊಂದಿಗೆ ಮಾತನಾಡಿದ್ದಾರೆ. ‘ಸಾಮಾನ್ಯವಾಗಿ ಥ್ರಿಲ್ಲರ್ ಚಿತ್ರಗಳು ಅಂದಾಗ, ಭಯ, ರಕ್ತಪಾತ ಎಲ್ಲವೂ ಹೆಚ್ಚಾಗಿರುತ್ತದೆ. ಇಂತಹ ಸಿನಿಮಾಗಳನ್ನು ಫ್ಯಾಮಿಲಿ ನೋಡುವುದು ಕಷ್ಟ. ಆದರೆ ‘ಆದ್ಯಾ’ ಹಾಗಿಲ್ಲ, ಇದರಲ್ಲಿ ಸಸ್ಪೆನ್ಸ್ ಇದೆ, ಥ್ರಿಲ್ಲಿಂಗ್ ಅಂಶಗಳಿವೆ, ಜತೆಗೆ ಫ್ಯಾಮಿಲಿ ಕೂತು ನೋಡುವಂತಹ ಭಾವನಾತ್ಮಕ ಅಂಶಗಳು ಇವೆ’ಎನ್ನುತ್ತಾರವರು. ‘ಈ ಚಿತ್ರದಲ್ಲಿ ನಟಿಸಿರುವವರೆಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಚಿರು ಮತ್ತು ಸಂಗೀತಾ ಭಟ್ ಎರಡ್ಮೂರು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ಕಾಲೇಜು ವಿದ್ಯಾರ್ಥಿ ಒಂದು ಕಡೆಯಾದರೆ, ಆಕ್ಷನ್ ಹೀರೋ ರೀತಿಯಲ್ಲಿ ಮತ್ತೊಂದು ಕಡೆ ಕಾಣಿಸಿಕೊಂಡಿದ್ದಾರೆ. ಶ್ರುತಿ ಹರಿಹರನ್ ಈ ಚಿತ್ರದ ಸರ್​ಪ್ರೖೆಸ್ ಎಲಿಮೆಂಟ್. ‘ಆದ್ಯಾ’ ಎಂಬುದು ಒಂದು ಮಗುವಿನ ಹೆಸರು ಆ ಮಗು ಇದೆಯೋ ಇಲ್ಲವೋ ಎಂಬುದೇ ಸಿನಿಮಾದ ಚಿತ್ರಕಥೆ’ಎಂದು ಹೇಳುತ್ತಾರೆ ಚೈತನ್ಯ. ಈ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ಇನ್ನು ಅಕ್ಷಯ್ರಾವ್ ಎಂಬುವವರು ಸಂಕಲನ ಮಾಡಿದ್ದು, ಅದೇ ಸಿನಿಮಾದ ಹೈಲೈಟ್ ಎನ್ನುವುದು ಚೈತನ್ಯ ಅವರ ಮಾತಾಗಿದೆ.

ಆದ್ಯಾದಲ್ಲಿ, ಭಾವನಾತ್ಮಕ ಅಂಶಗಳ ಜತೆಗೆ ಥ್ರಿಲ್ಲಿಂಗ್ ಕಂಟೆಂಟ್ ಕೂಡಾ ಇದೆ. ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ. | ಕೆ ಎಂ ಚೈತನ್ಯ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net