

ಬೆಂಗಳೂರು: ‘ಸ್ನೇಹ ಮಾಡೋದು ತುಂಬ ಸರಳ, ಅದನ್ನು ಉಳಿಸಿಕೊಂಡು ಹೋಗೋದು ಕಷ್ಟ’ ಹೀಗೆಂದಿದ್ದು ನಟ ದರ್ಶನ್. ನಟ ‘ಡೆಡ್ಲಿ’ ಆದಿತ್ಯ ಅಭಿನಯ, ಬಾಲು ಚಂದ್ರಶೇಖರ್ ನಿರ್ದೇಶನದ ‘ಮುಂದುವರೆದ ಅಧ್ಯಾಯ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. ಈ ವೇಳೆ ದರ್ಶನ್ ಭಾಗವಹಿಸಿ, ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
‘ಆದಿ-ನಾನು ಒಳ್ಳೆಯ ಸ್ನೇಹಿತರು. ಇಬ್ಬರೂ ‘ಸ್ನೇಹನಾ ಪ್ರೀತಿನಾ’ ಹಾಗೂ ‘ಚಕ್ರವರ್ತಿ’ ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದೇವೆ. ಮೊದಲ ಚಿತ್ರದಿಂದಲೂ ಇಲ್ಲಿಯವರೆಗೆ ಆದಿತ್ಯ ಅತ್ಯುತ್ತಮ ಚಿತ್ರಗಳನ್ನು ಕೊಟ್ಟಿದ್ದಾರೆ. ಇದು ಆದಿಯ ಮುಂದುವರೆದ ಅಧ್ಯಾಯ. ಪಾತ್ರಕ್ಕೆ ಹೇಗೆ ತಯಾರಾಗಬೇಕು ಎನ್ನುವುದನ್ನು ಆದಿತ್ಯ ನೋಡಿ ಕಲಿಯಬೇಕು’ ಎಂದ ನಟ ದರ್ಶನ್, ತಮ್ಮಿಬ್ಬರ ಸ್ನೇಹ ಮತ್ತು ಹಳೆಯ ನೆನಪುಗಳನ್ನು ಹಂಚಿಕೊಂಡರು.
‘ಸಿನಿಮಾ ಬಿಜಿನೆಸ್ ಅಲ್ಲ, ಪ್ಯಾಷನ್. ನಾನು ಮನಸ್ಸು ಮಾಡಿದ್ದರೆ 70ಕ್ಕೂ ಹೆಚ್ಚು ಸಿನಿಮಾ ಮಾಡುತ್ತಿದ್ದೆ. ಆದರೆ ನನಗೆ ಹತ್ತಿರವಾದ ಸಿನಿಮಾ ಮಾತ್ರ ಮಾಡಿದ್ದೇನೆ. ನಾನು ಇಲ್ಲಿಯವರಗೆ ಮಾಡಿದ ಎಲ್ಲ ಸಿನಿಮಾ ನನ್ನ ಬದುಕಿನ ಒಂದೊಂದು ಅಧ್ಯಾಯ’ ಎಂದರು ಆದಿತ್ಯ. ‘ಯಾರೂ ನಟರಾಗಿ ಹುಟ್ಟಲ್ಲ, ಸ್ಟಾರ್ ಆಗಿ ಮಾಡುವುದು ನಿರ್ದೇಶಕರು. ಹೀಗಾಗಿ ತಮಗೆ ಸಿನಿಮಾರಂಗದಲ್ಲಿ ಬದುಕು ಕೊಟ್ಟ ನಿರ್ದೇಶಕರನ್ನು ಪ್ರತಿಯೊಬ್ಬರು ನೆನೆಯಬೇಕು’ ಎನ್ನುವ ಮೂಲಕ ಸಮಾರಂಭದಲ್ಲಿದ್ದ ನಿರ್ದೇಶಕರು, ಚಿತ್ರರಂಗದ ಹಿರಿಯರನ್ನು ಆದಿತ್ಯ ಸನ್ಮಾನಿಸಿದರು.
ನಟ ದರ್ಶನ್ ಅಭಿನಯ, ವ್ಯಕ್ತಿತ್ವವನ್ನು ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಕೊಂಡಾಡಿದರು. ‘ಜೀವನದ ಒಂದು ಜರ್ನಿ ಇದು. ಪ್ರತಿ ಅಧ್ಯಾಯ ಮುಂದುವರೆಯಬೇಕು. ಎಷ್ಟೋ ಅಧ್ಯಾಯಗಳು ಹಿಂದೆ ಆಗಿದ್ದರೂ ಮುಂದಿನ ಅಧ್ಯಾಯ ಏನು ಎಂಬ ಕುತೂಹಲ ಇರುತ್ತದೆ. ಅದು ಈ ಸಿನಿಮಾ, ನಿರ್ದೇಶಕ ಎಲ್ಲ ಗೊತ್ತಿದೆ ಎನ್ನದೆ, ಗೊತ್ತಿಲ್ಲ ಎಂದುಕೊಂಡು ಸದಾ ಕಲಿಯುತ್ತಿರಬೇಕು’ ಎಂದು ಹೇಳಿ 75 ವರ್ಷದ ತಮ್ಮ ಸಿನಿಮಾ ಅನುಭವ ಹಂಚಿಕೊಂಡರು.
‘ನಾನು ಈ ಮಟ್ಟಕ್ಕೆ ಬೆಳೆಯಲು ‘ಡೆಡ್ಲಿ ಸೋಮ’ ಸಿನಿಮಾ, ಆದಿತ್ಯ ಕಾರಣ. ಅವರು ಕಥೆ ಆಯ್ಕೆಯಲ್ಲಿ ಚ್ಯೂಸಿ ಆಗಿರದೆ ಹೆಚ್ಚೆಚ್ಚು ಸಿನಿಮಾ ಮಾಡಬೇಕು’ ಎಂಬ ಆಸೆ ವ್ಯಕ್ತಪಡಿಸಿದರು ‘ಡೆಡ್ಲಿ ಸೋಮ’ ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ. ‘ಎದೆಗಾರಿಕೆ’ ಸಿನಿಮಾ ನನಗೆ ಅಪಾರ ಹೆಸರು ತಂದುಕೊಟ್ಟಿದೆ. ನಾನು ಸುಮಾರು ಚಿತ್ರ ಮಾಡಿದರೂ ಇಂದಿಗೂ ನನ್ನನ್ನು ‘ಎದೆಗಾರಿಕೆ’ ಚಿತ್ರದ ನಿರ್ದೇಶಕಿ ಅಂತಲೇ ಗುರುತಿಸುತ್ತಾರೆ’ ಎಂದು ಹೇಳುವ ನಿರ್ದೇಶಕಿ ಸುಮನ್ ಕಿತ್ತೂರು, ‘ಆದಿತ್ಯ ಜತೆ ಮತ್ತೊಂದು ಚಿತ್ರ ಮಾಡುತ್ತೇನೆ’ ಎಂದರು.