

ಬೆಂಗಳೂರು: ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರವು ಫೆಬ್ರವರಿ 19ಕ್ಕೆ ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಚಿತ್ರದ ಸೆನ್ಸಾರ್ ಆಗಿದ್ದು, ಚಿತ್ರಕ್ಕೆ 'ಯು/ಎ' ಸರ್ಟಿಫಿಕೇಟ್ ಸಿಕ್ಕಿದೆ.
ಚಿತ್ರಕ್ಕೆ ಸೆನ್ಸಾರ್ನಿಂದ ಪ್ರಮಾಣಪತ್ರ ಸಿಕ್ಕ ಖುಷಿಯಲ್ಲಿ ಚಿತ್ರತಂಡದವರು ಚಿತ್ರಮಂದಿರಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಚಿತ್ರವು ರಾಜ್ಯಾದ್ಯಂತ 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಅಲ್ಲಿಗೆ ಮೂರು ಭಾಷೆಗಳಿಂದ, ಮೂರು ರಾಜ್ಯಗಳಲ್ಲಿ 'ಪೊಗರು' ಚಿತ್ರವು 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.
ಚಿತ್ರದ ಬಿಡುಗಡೆಗೆ ಇನ್ನೂ ಒಂದು ವಾರವಿರುವಾಗ, ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಿದೆ. ಈಗಾಗಲೇ ಬುಕ್ ಮೈ ಶೋನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಬೆಂಗಳೂರಿನ ಕಾವೇರಿ, ಸಿದ್ಧೇಶ್ವರ, ವೀರೇಶ್, ವಿಕ್ಟರಿ ಮುಂತಾದ ಚಿತ್ರಮಂದಿರಗಳಲ್ಲಿ ಬುಕ್ಕಿಂಗ್ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಮಂದಿರಗಳಲ್ಲಿ ಬುಕ್ಕಿಂಗ್ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಆಮೀರ್ ಖಾನ್ ಕೈಯಲ್ಲಿ ಮೂರು ಸಿನಿಮಾ!
'ಪೊಗರು' ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದು, ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆಯನ್ನು ರಚಿಸಿದ್ದಾರೆ. ಚಿತ್ರದಲ್ಲಿ ಧ್ರುವ ಜತೆಗೆ ರಶ್ಮಿಕಾ ಮಂದಣ್ಣ, ಚಿಕ್ಕಣ್ಣ, ಧನಂಜಯ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಹಲವು ಜನಪ್ರಿಯ ನಟರು ನಟಿಸಿದ್ದಾರೆ.