

ಹೈದರಾಬಾದ್: 2008ರ ಮುಂಬೈ ಮೇಲಿನ ಉಗ್ರರ ದಾಳಿಯನ್ನೇ ಆಧರಿಸಿ ಈಗಾಗಲೇ ಒಂದಷ್ಟು ಡಾಕ್ಯುಮೆಂಟರಿಗಳು ಮೂಡಿಬಂದಿವೆ. ಹಾಲಿವುಡ್ನಲ್ಲಿ ಸಿನಿಮಾ ಸಹ ಮಾಡಲಾಗಿದೆ. ಇದೀಗ ಟಾಲಿವುಡ್ನಲ್ಲಿ 26/11 ದಾಳಿಯಲ್ಲಿ ಪ್ರಾಣತೆತ್ತ ಮೇಜರ್ ಉನ್ನಿಕೃಷ್ಣನ್ ಕುರಿತು ಸಿನಿಮಾ ಸಿದ್ಧವಾಗುತ್ತಿದೆ. ಆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೇಜರ್ ಶೀರ್ಷಿಕೆಯ ಈ ಸಿನಿಮಾದಲ್ಲಿ ಉನ್ನಿಕೃಷ್ಣನ್ ಪಾತ್ರದಲ್ಲಿ ಅಡಿವಿ ಶೇಷ ಕಾಣಿಸಿಕೊಳ್ಳಲಿದ್ದು, ಈ ಚಿತ್ರವನ್ನು ಶಶಿ ಕಿರಣ್ ಟಿಕ್ಕಾ ನಿರ್ದೇಶನ ಮಾಡಲಿದ್ದಾರೆ. ವಿಶೇಷ ಏನೆಂದರೆ, ಈ ಚಿತ್ರವನ್ನು ಪ್ರಿನ್ಸ್ ಮಹೇಶ್ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಎ.ಎಸ್ ಎಂಟರ್ಟೈನ್ಮೆಂಟ್ ನಿರ್ಮಾಣದಲ್ಲಿ ಕೈ ಜೋಡಿಸಿದೆ.
ತೆಲುಗು ಮತ್ತು ಹಿಂದಿಯಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಆಗಿ ತೆರೆಕಾಣುವ ಸಾಧ್ಯತೆ ಇದೆ. 2008ರಲ್ಲಿ ಲಷ್ಕರ್ ಈ ತೊಯ್ಬಾ ಉಗ್ರ ಸಂಘಟನೆ ಮುಂಬೈನ ತಾಜ್ ಹೊಟೇಲ್ ಮೇಲೆ ದಾಳಿ ಮಾಡಿತ್ತು. 9 ಉಗ್ರರು ಗುಂಡಿನ ಮಳೆ ಸುರಿಸಿದ್ದರು. ಅದರಲ್ಲಿ 166ಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದರು. ಇದೇ ವೇಳೆ ಪ್ರಾಣ ಪಣಕ್ಕಿಟ್ಟು ಮೇಜರ್ ಉನ್ನಿಕೃಷ್ಣನ್ ಸಹ ಉಗ್ರರನ್ನು ಹತ್ಯೆಗೈದು ಹುತಾತ್ಮರಾಗಿದ್ದರು. ಇದೀಗ ಈ ಕಥೆಯನ್ನೇ ಶಶಿ ಕಿರಣ್ ಸಿನಿಮಾ ಮಾಡುತ್ತಿದ್ದಾರೆ.
ಸದ್ಯಕ್ಕೆ ಫಸ್ಟ್ ಲುಕ್ ಬಿಡುಗಡೆ ಮಾಡಿಕೊಂಡಿ ರುವ ತಂಡ, 2021ರ ವೇಳೆಗೆ ಚಿತ್ರ ಬಿಡುಗಡೆ ಆಗಲಿದೆ. ಸಾಯಿ ಮಂಜ್ರೇಕರ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)