ಒಂದೇ ತಿಂಗಳಲ್ಲಿ ಪ್ರೀತಿಯಾಗಿ, ಮದುವೆಯಾಗೋಕೆ ಹೇಗೆ ಸಾಧ್ಯ?: ಆದಿತ್ಯ ನಾರಾಯಣ್​

Aditya - Neha
Published on

ಮುಂಬೈ: ಬಾಲಿವುಡ್​ ಗಾಯಕಿ ನೇಹಾ ಕಕ್ಕರ್​ ಮತ್ತು ರೋಹನ್​ಪ್ರೀತ್​ ಸಿಂಗ್​ ಮದುವೆ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ಭೇಟಿಯಾದ ನೇಹಾ ಮತ್ತು ರೋಹನ್​ಪ್ರೀತ್​, ಇದೇ ಅಕ್ಟೋಬರ್​ 26ಕ್ಕೆ ಮದುವೆಯಾಗುತ್ತಿದ್ದಾರೆ. ಒಂದೇ ತಿಂಗಳಲ್ಲಿ ಇಷ್ಟೆಲ್ಲಾ ಹೇಗೆ ಸಾಧ್ಯವಾಯಿತು ಎಂಬುದು ಹಲವರ ಪ್ರಶ್ನೆ. ಇದೀಗ ಖ್ಯಾತ ಗಾಯಕ ಉದಿತ್​ ನಾರಾಯಣ್​ ಅವರ ಮಗ ಆದಿತ್ಯ ನಾರಾಯಣ್​ ಸಹ ಅದೇ ಪ್ರಶ್ನೆಯನ್ನು ಎತ್ತಿದ್ದಾರೆ.

ಆದಿತ್ಯ ನಾರಾಯಣ್​ ಮತ್ತು ನೇಹಾ ಕಕ್ಕರ್​ ಒಂದು ಕಾಲಕ್ಕೆ ಬಾಲಿವುಡ್​ನಲ್ಲಿ ಪ್ರಣಯಪಕ್ಷಿಗಳಾಗಿ ಗುರುತಿಸಿಕೊಂಡಿದ್ದರು. ಆದರೆ, ಕಾಲಕ್ರಮೇಣ ಅವರ ನಡುವೆ ವೈಮನಸ್ಯ ಉಂಟಾಗಿ ಇಬ್ಬರೂ ದೂರವಾದರು. ಆದಿತ್ಯ ಜೀವನದಿಂದ ದೂರವಾದ ನೇಹಾ, ರೋಹನ್​ಪ್ರೀತ್​ ಸಿಂಗ್​ ಅವರನ್ನು ಭೇಟಿಯಾದರು. ಭೇಟಿಯಾದ ಕೆಲವೇ ದಿನಗಳಲ್ಲಿ ಅವರಿಬ್ಬರ ಮದುವೆಯ ಘೋಷಣೆಯಾಗಿದೆ.

ಇದು ಹೇಗೆ ಸಾಧ್ಯ ಎನ್ನುವುದರ ಜತೆಗೆ, ಆದಿತ್ಯ ಅವರನ್ನು ಉರಿಸುವುದಕ್ಕೆಂದೇ ನೇಹಾ ಈ ರೀತಿ ಆತುರಾತುರವಾಗಿ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯವಾಗಿ ಮಾತನಾಡಿರುವ ಆದಿತ್ಯ, ತಮ್ಮ ಮಾಜಿ ಗೆಳತಿಯ ಮದುವೆಗೆ ಶುಭ ಕೋರಿದ್ದಾರೆ. ಅಷ್ಟೇ ಅಲ್ಲ, ಅವರು ಸಹ ಇಷ್ಟು ಆತುರ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನೇಹಾ ನಿಜಕ್ಕೂ ಮದುವೆಯಾಗುತ್ತಿದ್ದಾರಾ? ನನಗಂತೂ ಆಹ್ವಾನಪತ್ರ ಸಿಕ್ಕಿಲ್ಲ. ಕೆಲವು ವಾರಗಳ ಹಿಂದಷ್ಟೇ ರೋಹನ್​ಪ್ರೀತ್​ ಅವರನ್ನು ನೇಹಾ ಭೇಟಿಯಾದರಂತೆ. ಭೇಟಿಯಾದ ಒಂದೇ ತಿಂಗಳಲ್ಲಿ ಮದುವೆಯಾಗುತ್ತಿದ್ದಾರೆ ಎಂದರೆ ಅದು ಹೇಗೆ ಸಾಧ್ಯ? ಈ ಕುರಿತು ನೇಹಾ ಆಗಲೀ, ರೋಹನ್​ಪ್ರೀತ್​ ಆಗಲೀ ಎಲ್ಲೂ ಮಾತನಾಡಿಲ್ಲ. ಹಾಗಾಗಿ ಮದುವೆ ನಡೆಯುತ್ತಿದೆಯಾ, ಇಲ್ಲವಾ ಎಂಬುದೇ ನನಗೆ ಗೊತ್ತಿಲ್ಲ. ಹಾಗಾಗಿ ಈಗಲಾದರೂ ಅವರಿಬ್ಬರೂ ಮದುವೆ ಬಗ್ಗೆ ಮಾತನಾಡಲಿ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net