ಸುಂದರಿ ಅಂತ ನಿನ್ನ ಸೆಲೆಕ್ಟ್ ಮಾಡಿಲ್ಲ ... ಹಾಗಂತ ಅನುಷ್ಕಾ ಶರ್ಮಗೆ ಹೇಳಿದ್ದು ಯಾರು?

Anushka Sharma Final
Published on

ಅನುಷ್ಕಾ ಶರ್ಮ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಬಾಲಿವುಡ್‌ನ ಮಿಲ್ಕಿ ಬ್ಯೂಟಿ, ಸುರಸುಂದರಿ ಎಂದೆಲ್ಲಾ ಕರೆಸಿಕೊಳ್ಳುವ ಅನುಷ್ಕಾಗೆ ನಾಯಕಿಯಾಗಿದ್ದು ಅವರ ಚೆಲುವಿನಿಂದ ಎಂದುಕೊಂಡಿದ್ದರೆ, ಅದು ತಪ್ಪು. ‘ರಬ್ ನೇ ಬನಾ ದೀ ಜೋಡಿ’ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿದ್ದು ಅವರು ಚೆಲವಿನಿಂದಲ್ಲವಂತೆ. ಹಾಗಾದರೆ, ಇನ್ನೇನು ಕಾರಣ ಎಂದರೆ ಅದಕ್ಕೆ ಉತ್ತರ ಪ್ರತಿಭೆ.

ಸಂದರ್ಶನವೊಂದರಲ್ಲಿ ತಾವು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿರುವ ಅನುಷ್ಕಾ, ‘ರಬ್ ನೇ ಬನಾ ದೀ ಜೋಡಿ’ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ ಎಂದು ವಿವರವಾಗಿ ಹೇಳಿಕೊಂಡಿದ್ದಾರೆ.

‘ನಾನು ‘ರಬ್ ನೇ ಬನಾ ದೀ ಜೋಡಿ’ ಚಿತ್ರದ ಆಡಿಷನ್‌ಗೆ ಹೋಗಿದ್ದೆ. ಆದಿತ್ಯ ಚೋಪ್ರಾ ಅವರ ಆಫೀಸಿನಲ್ಲಿದ್ದೆ. ಅಷ್ಟರಲ್ಲಾಗಲೇ ಆಡಿಷನ್ ಆಗಿ ಸಂದರ್ಶನಕ್ಕೆ ಕೂತಿದ್ದೆ. ಆ ಸಂದರ್ಭದಲ್ಲಿ ಮಾತನಾಡಿದ ಆದಿತ್ಯ, ತಾನು ಹೀರೊಯಿನ್ ಆಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿದರು. ನಾನು ಆಯ್ಕೆಯಾಗುವುದಕ್ಕೆ ಪ್ರಮುಖ ಕಾರಣ ಪ್ರತಿಭೆಯೇ ಹೊರತು, ಚೆಲುವಲ್ಲ. ಹಾಗಂತ ಅವರೇ ಹೇಳಿದರು. ನೀನು ಸುಂದರಿ ಅಂತ ಆಯ್ಕೆ ಮಾಡಿಲ್ಲ, ಪ್ರತಿಭಾವಂತೆ ಎಂಬ ಕಾರಣಕ್ಕೆ ಆಯ್ಕೆ ಮಾಡಿದ್ದೇನೆ ಎಂದರು. ಹಾಗಾಗಿ ಕಷ್ಟಪಟ್ಟು ಕೆಲಸ ಮಾಡು ಎಂದು ಸಲಹೆ ಕೊಟ್ಟರು. ಒಂದಲ್ಲ, ಮೂರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಬೇಕು ಎಂದು ಆರ್ ಕೊಟ್ಟರು’ ಎಂದು ನೆನಪಿಸಿಕೊಳ್ಳುತ್ತಾರೆ ಅನುಷ್ಕಾ.

ಅನುಷ್ಕಾಗೆ ಅದಕ್ಕೂ ಮುನ್ನ ತಾನು ಸುಂದರಿ ಎಂಬ ಹಮ್ಮು ಸ್ವಲ್ಪ ಜಾಸ್ತಿಯೇ ಇತ್ತಂತೆ. ಆದರೆ, ಶೂಟಿಂಗ್‌ಗೆ ಹೋದಾಗ ಕಡಿಮೆಯಾಯಿತಂತೆ. ‘ಚಿತ್ರೀಕರಣದ ಮೊದಲ ದಿನ ನನ್ನನ್ನು ನಾನು ಮಾನಿಟರ್‌ನಲ್ಲಿ ನೋಡಿಕೊಂಡಾಗ, ಆದಿತ್ಯ ಹೇಳಿದ್ದು ಸರಿಯಾಗಿದೆ ಎಂದನಿಸಿತು’ ಎಂದು ಅವರು ಒಪ್ಪಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net