ಬೆಳೆಯುತ್ತಿದೆ ಸಿನಿಮಾ ಪಟ್ಟಿ: ತಿಂಗಳಿಗೆ ಒಂದರಂತೆ ಅದಿತಿ ಚಿತ್ರಗಳು

Adithi
Published on

ಡಿಸೆಂಬರ್​ನಲ್ಲಿ ‘ಆನ’ ಬಿಡುಗಡೆಯಾಯ್ತು. ಜನವರಿಯ ಬಾಬ್ತಿನಲ್ಲಿ ಇಂದು (ಜ.27) ‘ಒಂಬತ್ತನೇ ದಿಕ್ಕು’ ಬಿಡುಗಡೆಯಾಗುತ್ತಿದೆ. ಮುಂದಿನ ತಿಂಗಳು ಇನ್ನೊಂದು. ಒಟ್ಟಿನಲ್ಲಿ ಇನ್ನೊಂದು ವರ್ಷ ಪ್ರತಿ ತಿಂಗಳು ಅದಿತಿ ಅಭಿನಯದ ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಈ ವರ್ಷದ ತಮ್ಮ ಮೊದಲ ಚಿತ್ರವಾದ ‘ಒಂಬತ್ತನೇ ದಿಕ್ಕು’ ಬಗ್ಗೆ ಅದಿತಿ ಬಹಳ ಥ್ರಿಲ್ ಆಗಿದ್ದಾರೆ. ‘ರಂಗನಾಯಕಿ’ ನಂತರ ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಇದು ಅವರ ಎರಡನೇ ಸಿನಿಮಾ. ಈ ಚಿತ್ರದ ಬಗ್ಗೆ ಮಾತನಾಡುವ ಅವರು, ‘ವೀಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸುವ ಚಿತ್ರವಿದು. ಇಡೀ ಕಥೆ ಸಾಗುವ ಪರಿಯೇ ಒಂದು ರೀತಿ ಮಜವಾಗಿದೆ. ನನ್ನದು ಚಿಕ್ಕ ಪಾತ್ರವಾದರೂ, ಪಾತ್ರಕ್ಕೆ ನಿರ್ದೇಶಕರು ಪ್ರಾಮುಖ್ಯತೆ ನೀಡಿದ್ದಾರೆ. ಮಿಕ್ಕ ಥ್ರಿಲ್ಲಿಂಗ್ ಅಂಶವನ್ನು ಸಿನಿಮಾದಲ್ಲಿಯೇ ನೋಡಿ’ ಎನ್ನುತ್ತಾರೆ ಅದಿತಿ.

ಹೊಸದಾಗಿ ಮೂರು ಸೇರ್ಪಡೆ: ಮಿಕ್ಕಂತೆ ‘ತೋತಾಪುರಿ’, ‘ತೋತಾಪುರಿ-2’, ‘ಗಜಾನನ ಆಂಡ್ ಗ್ಯಾಂಗ್’, ‘ಓಲ್ಡ್ ಮಾಂಕ್’, ‘ದಿಲ್ಮಾರ್’, ‘ಚಾಂಪಿಯನ್’, ‘ತ್ರಿಬಲ್ ರೈಡಿಂಗ್’, ‘5ಡಿ’, ‘ಅಂದೊಂದಿತ್ತು ಕಾಲ’, ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’, ‘ಮಾಫಿಯಾ’, ಶೀರ್ಷಿಕೆ ಅಂತಿಮವಾಗದ ಹೊಸ ಸಿನಿಮಾ ... ಹೀಗೆ ನಟಿ ಅದಿತಿ ಪ್ರಭುದೇವ ಸಿನಿಮಾ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಪೈಕಿ ಕೊನೆಯ ಮೂರು ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲ ಚಿತ್ರಗಳಲ್ಲೂ ಅವರು ತಮ್ಮ ಕೆಲಸ ಮುಗಿಸಿ ಬಿಡುಗಡೆಗೆ ಕಾದಿದ್ದಾರೆ. ‘ಒಂಬತ್ತನೇ ದಿಕ್ಕು’ ಬಳಿಕ ‘ಒಲ್ಡ್​ಮಾಂಕ್’ ಮತ್ತು ‘ತೋತಾಪುರಿ’ ಚಿತ್ರಗಳು ತೆರೆಗೆ ಬರಲಿವೆ.

ಬಿಡುವಿಲ್ಲದೆ ಶೂಟಿಂಗ್​ನಲ್ಲಿ ಭಾಗಿ: ‘ಈ ಎಲ್ಲ ಖುಷಿಯ ನಡುವೆ ಮತ್ತಷ್ಟು ಹೊಸ ಸಿನಿಮಾಗಳು ಕರಿಯರ್​ಗೆ ಸೇರ್ಪಡೆಯಾಗಿವೆ. ‘ಜಮಾಲಿಗುಡ್ಡ’, ‘ಮಾಫಿಯಾ’ ಹೊಸ ಅನುಭವ ನೀಡುತ್ತಿವೆ. ಶರಣ್ ಅವರೊಂದಿಗಿನ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರದ ಶೂಟಿಂಗ್ ಸಹ ಶುರುವಾಗಿದೆ. ದಿನವಿಡಿ ಬಿಡುವಿಲ್ಲದೆ ಶೂಟಿಂಗ್ ಗುಂಗಿನಲ್ಲಿಯೇ ಕಾಲ ಕಳೆಯುತ್ತಿದ್ದೇನೆ’ ಎಂಬುದು ಅವರ ಮಾತು.

ಮದುವೆ ಬೇಡ ಎಂದವರೇ ಹೆಚ್ಚಂತೆ: ಸಾಲುಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಅದಿತಿ, ಇತ್ತೀಚೆಗಷ್ಟೇ ಸೋಮವಾರಪೇಟೆಯ ಯಶಸ್ ಎಂಬುವವರ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ‘ನನ್ನ ನಿಶ್ಚಿತಾರ್ಥದ ವಿಷಯ ಹೊರಬಿದ್ದಾಗ, ಈ ನಿರ್ಧಾರ ನಿನ್ನ ವೃತ್ತಿ ಜೀವನಕ್ಕೆ ಸಮಸ್ಯೆ ಆಗಲಿದೆ ಎಂಬ ಮಾತುಗಳು ಕೇಳಿಬಂದವು. ಆದರೆ, ಕಲಾವಿದರಿಗೂ ವೈಯಕ್ತಿಕ ಜೀವನವಿದೆ. ಇಷ್ಟು ವರ್ಷ ಒಬ್ಬಳೇ ಇಲ್ಲಿಯವರೆಗೂ ಒಂದಿರುವುದು ಸರಳವಾಗಿರಲಿಲ್ಲ. ಯಾರ ಬಳಿಯೂ ಕೆಲವು ವಿಚಾರಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಆಗಿರಲಿಲ್ಲ. ಹಾಗಿರುವಾಗ ನನ್ನ ಜತೆ ಶಕ್ತಿಯಾಗಿ ನಿಲ್ಲುವ ಹುಡುಗ ಬೇಕಿತ್ತು. ಆಗ ಯಶಸ್ ಸಿಕ್ಕರು. ಅವರಿಂದಲೂ ನನಗೆ ಬೆಂಬಲ ಸಿಕ್ಕಿದೆ. ಸದ್ಯಕ್ಕೆ ಇದೇ ವರ್ಷ ಮದುವೆ ಪ್ಲಾನ್ ಇಲ್ಲ’ ಎನ್ನುತ್ತಾರೆ ಅದಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net