

ಬೆಂಗಳೂರು: ಅದಿತಿ ಪ್ರಭುದೇವ ಕೈಯಲ್ಲಿ ಏನಿಲ್ಲವೆಂದರೂ ಏಳೆಂಟು ಸಿನಿಮಾಗಳಿವೆ. ಅದರಲ್ಲಿ ನಾಲ್ಕೈದು ಸಿನಿಮಾ ಬಿಡುಗಡೆಯ ಸನಿಹದಲ್ಲಿದ್ದರೆ, ಇನ್ನೂ ಕೆಲವು ಶೂಟಿಂಗ್ ಹಂತದಲ್ಲಿವೆ. ಇದೀಗ ಅದಿತಿ, ಸತೀಶ್ ನೀನಾಸಂ ಅಭಿನಯದ ‘ಮ್ಯಾಟ್ನಿ’ ಸಿನಿಮಾ ಒಪ್ಪಿಕೊಂಡು, ಒಂದಷ್ಟು ಭಾಗದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಅರೇ, ‘ಮ್ಯಾಟ್ನಿ’ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಲ್ಲವೇ? ಹೀಗೊಂದು ಪ್ರಶ್ನೆ ಮೂಡಿದರೂ ಅಚ್ಚರಿಯೇನಿಲ್ಲ. ಏಕೆಂದರೆ, ಇದಕ್ಕೂ ಮುನ್ನ ಚಿತ್ರದಲ್ಲಿ ರಚಿತಾ ನಟಿಸುತ್ತಿರುವ ಸುದ್ದಿ ಇತ್ತು. ಇದೀಗ ಅದಿತಿ ಸಹ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ ಎಂದು ನಿರ್ದೇಶಕ ಮನೋಹರ್ ಕಾಂಪಳ್ಳಿ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
‘‘ಮ್ಯಾಟ್ನಿ’ ಡಾರ್ಕ್ ಕಾಮಿಡಿ ಶೈಲಿಯ ಸಿನಿಮಾ. ಥ್ರಿಲ್ಲರ್ ಕಥೆಯೂ ಚಿತ್ರದಲ್ಲಿದೆ. ಚೈತ್ರಾ ಹೆಸರಿನ ಮೆಡಿಕಲ್ ವಿದ್ಯಾರ್ಥಿನಿಯಾಗಿ ಅದಿತಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರು ನಾಯಕಿಯರಿದ್ದರೂ, ಪಾತ್ರದ ವಿಚಾರದಲ್ಲಿ ಇಬ್ಬರೂ ಸರಿಸಮ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದೆ. ನವೆಂಬರ್ನಲ್ಲಿ ಕುಂಬಳಕಾಯಿ ಒಡೆದು, ಜನವರಿಯಲ್ಲಿ ಸಿನಿಮಾ ತೆರೆಗೆ ತರಬೇಕೆಂದುಕೊಂಡಿದ್ದೇವೆ’ ಎನ್ನುತ್ತಾರೆ ಮನೋಹರ್. ಹಿಂದೆ ಸತೀಶ್ ನೀನಾಸಂ ಜತೆಗೆ ‘ಬ್ರಹ್ಮಚಾರಿ’ ಸಿನಿಮಾದಲ್ಲಿ ಅದಿತಿ ನಟಿಸಿದ್ದರು. ಇದೀಗ ಎರಡನೇ ಸಲ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸುಧಾಕರ್ ಅವರ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ಈ ಚಿತ್ರಕ್ಕಿದೆ. ಪಾರ್ವತಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.