

ಬೆಂಗಳೂರು: ನಟಿ ಅದಿತಿ ಪ್ರಭುದೇವ ಸದ್ಯ ಸಾಲುಸಾಲು ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾಗುತ್ತಿದ್ದರೆ, ಇತ್ತ ಒಪ್ಪಿಕೊಂಡ ಸಿನಿಮಾಗಳ ಶೂಟಿಂಗ್ನಲ್ಲಿಯೂ ಭಾಗವಹಿಸಿದ್ದಾರೆ. ಇವೆಲ್ಲದರ ಜತೆಗೆ ಆಲ್ಬಂ ಹಾಡಿಗೂ ಹೆಜ್ಜೆ ಹಾಕಿ ಹುಬ್ಬೇರಿಸಿದ್ದಾರೆ. ಇದೀಗ ಸೂಪರ್ ಹೀರೋ ಪರಿಕಲ್ಪನೆಯ ಸಿನಿಮಾದ ಭಾಗವಾಗುತ್ತಿದ್ದಾರೆ ಅದಿತಿ.
ಏನಿದು ಸೂಪರ್ ಹೀರೋ? ಈ ವಿಚಾರದ ಬಗ್ಗೆ ಮಾಹಿತಿ ನೀಡುವ ಅದಿತಿ, ‘ಭಾರತದ ಮೊದಲ ಸೂಪರ್ ಹೀರೋ ನನ್ನ ಮುಂದಿನ ಸಿನಿಮಾ. ಅಕ್ಟೋಬರ್ 24ರಂದು ಫಸ್ಟ್ ಲುಕ್ ಬಿಡುಗಡೆ ಆಗಲಿದೆ. ಹೊಸ ರೀತಿಯ ಮತ್ತು ವಿಭಿನ್ನ ಪ್ರಯತ್ನ ಇದಾಗಿರಲಿದೆ. ಶೀಘ್ರದಲ್ಲಿ ಹೆಚ್ಚಿನ ಮಾಹಿತಿ ಜತೆಗೆ ಆಗಮಿಸಲಿದ್ದೇನೆ’ ಎಂದು ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಸಣ್ಣ ಸುಳಿವು ನೀಡಿದ್ದಾರೆ. ಈಗಾಗಲೇ ಬಾಲಿವುಡ್ನಲ್ಲಿ ನಟಿ ಕತ್ರಿನಾ ಕೈಫ್ ಸೂಪರ್ ಹೀರೋ ಕಾನ್ಸೆಪ್ಟ್ನ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಎರಡು ಭಾಗಗಳಲ್ಲಿ ಆ ಸಿನಿಮಾ ಸಿದ್ಧವಾಗಲಿದೆ ಎಂಬ ಸುದ್ದಿ ಇದೆ. ಇದೀಗ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಸಿನಿಮಾ ಮಾಡುವ ಬಗ್ಗೆ ಅದಿತಿ ಮಾಹಿತಿ ಹೊರಹಾಕಿದ್ದು, ಕುತೂಹಲ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ‘ಓಲ್ಡ್ ಮಾಂಕ್’ ಚಿತ್ರೀಕರಣದಲ್ಲಿ ಭಾಗವಹಿಸಿರುವ ಅದಿತಿ, ‘ಗಜಾನನ ಗ್ಯಾಂಗ್’ ಮತ್ತು ‘ಚಾಂಪಿಯನ್’ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಸದ್ಯದಲ್ಲೇ ಅವುಗಳ ಚಿತ್ರೀಕರಣಗಳಲ್ಲಿಯೂ ಪಾಲ್ಗೊಳ್ಳಲಿದ್ದಾರೆ.