ಅದಿತಿ ಪ್ರಭುದೇವ ಅಕೌಂಟಲ್ಲಿ ಇನ್ನೆರಡು ಸಿನಿಮಾ

Adithi
Published on

ಬೆಂಗಳೂರು: ‘ಆನ’ ಎಂಬ ಭಾರತದ ಮೊದಲ ಮಹಿಳಾ ಸೂಪರ್​ಹೀರೋ ಚಿತ್ರದಲ್ಲಿ ಅದಿತಿ ನಟಿಸುತ್ತಿರುವುದು ಕಳೆದ ವಾರದ ಸುದ್ದಿ. ಈ ವಾರ, ಅದಿತಿ ಚಿತ್ರಗಳ ಪಟ್ಟಿಯಲ್ಲಿ ಇನ್ನಷ್ಟು ತಿದ್ದುಪಡಿಯಾಗಿದೆ. ಪ್ರಮುಖವಾಗಿ, ‘ಆನ’ ನಂತರ ಅದಿತಿ ಇನ್ನೂ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಈ ಎರಡರಲ್ಲಿ ಈಗಾಗಲೇ ಒಂದು ಚಿತ್ರದ ಮುಹೂರ್ತ ಸದ್ದಿಲ್ಲದೆ ನಡೆದಿದೆ.

ಡಾ. ರಾಜಕುಮಾರ್ ಕುಟುಂಬದ ಧ್ರುವನ್ ನಟಿಸುತ್ತಿರುವ ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಎಂಬ ಚಿತ್ರದಲ್ಲಿ ಅದಿತಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ವಿಜಯದಶಮಿಯಂದು ಚಿತ್ರದ ಮುಹೂರ್ತವಾಗಿದ್ದು, ದರ್ಶನ್ ಬಂದು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಜತೆಗೆ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಇದರ ಜತೆಗೆ, ಗಣೇಶ್ ಅಭಿನಯದ ‘ತ್ರಿಬ್ಬಲ್ ರೈಡಿಂಗ್’ ಚಿತ್ರಕ್ಕೂ ಅದಿತಿ ಪ್ರಭುದೇವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇದೆ.

ತಮಾಷೆಯಾಗಿ ಸಾಗುವ ಈ ಚಿತ್ರದಲ್ಲಿ ಅದಿತಿ ಅಲ್ಲದೆ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ಸಹ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈಗಾಗಲೇ ಅದಿತಿ ಕಥೆ ಕೇಳಿ ಇಷ್ಟಪಟ್ಟಿದ್ದು, ಸದ್ಯದಲ್ಲೇ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಇದಲ್ಲದೆ, ಶ್ರೀನಿ ಅಭಿನಯ ಮತ್ತು ನಿರ್ದೇಶನದ ‘ಓಲ್ಡ್ ಮಾಂಕ್’ ಚಿತ್ರದಲ್ಲಿ ನಟಿಸುತ್ತಿರುವ ಅದಿತಿ, ‘ಗಜಾನನ ಆಂಡ್ ಗ್ಯಾಂಗ್’ ಎಂಬ ಚಿತ್ರದಲ್ಲೂ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net