

| ಪ್ರಮೋದ ಮೋಹನ ಹೆಗಡೆ
ರಾಮಾಯಣ ಮಹಾಕಾವ್ಯ ವ್ಯಕ್ತಿ ಅಥವಾ ದೇವರ ಕಥೆಯಾಗಿ ಉಳಿದಿಲ್ಲ. ಅದು ಸ್ಫೂರ್ತಿ, ಭಾವನೆಗಳ ಸಂಘರ್ಷ, ಧರ್ಮ-ಅಧರ್ಮಗಳ ಯುದ್ಧ, ಭಕ್ತಿ, ಪ್ರೇಮ, ನಿಷ್ಠೆ ಹೀಗೆ ಹಲವು ಮಾನವೀಯ ಮೌಲ್ಯಗಳನ್ನು ತಿಳಿಸುವ ಒಂದು ಗ್ರಂಥ ಎಂದರೆ ತಪ್ಪಲ್ಲ. ಈ ಕಥೆಯನ್ನು ಅನೇಕರು ಸಿನಿಮಾ, ಧಾರಾವಾಹಿ ಮೂಲಕ ಜನರಿಗೆ ನೀಡಿದ್ದಾರೆ. ಅದೇ ರೀತಿ ಓಮ್ ರಾವುತ್ ನಿರ್ದೇಶನದ ‘ಆದಿಪುರುಷ್’ ಕೂಡ ವಾಲ್ಮೀಕಿ ರಾಮಾಯಣ ಆಧಾರಿತ ಚಿತ್ರವಾಗಿದ್ದು, ಎಲ್ಲ ಪೀಳಿಗೆ ನೋಡಬಹುದಾದಂತೆ ನಿರ್ಮಿಸಲಾಗಿದೆ.
ಟಾಲಿವುಡ್ ನಟ ಪ್ರಭಾಸ್, ಬಾಲಿವುಡ್ ನಟಿ ಕೃತಿ ಸನನ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಆದಿಪುರುಷ್’. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಮಂಗಳವಾರ (ಜೂನ್ 6) ತಿರುಪತಿಯಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ತ್ರಿದಂಡಿ ರಾಮಾನುಜ ಚಿನ್ನ ಜೀಯರ್ ಸ್ವಾಮೀಜಿ ‘ಆದಿಪುರುಷ ಎಂದರೆ ಅವನು ನಿಜವಾದ ಬಾಹುಲಿ. ನಿಜವಾದ ‘ಬಾಹುಬಲಿ’ಯನ್ನು , ಪ್ರತಿ ಮನಷ್ಯನ ಮನಸ್ಸಿನಲ್ಲಿರುವ ರಾಮನನ್ನು ಪ್ರಭಾಸ್ ಪರಿಚಯಿಸುತ್ತಿದ್ದಾರೆ. ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಆದರ್ಶವಾದ ರಾಮನ ಕಥೆಯನ್ನು ಸಾಮಾನ್ಯ ಮನುಷ್ಯನಿಗೆ ಚಿತ್ರತಂಡ ತಲುಪಿಸುತ್ತಿದೆ. 1,000 ವರ್ಷಗಳ ಹಿಂದೆ ರಾಮಾನುಜಾಚಾರ್ಯರು ತಿರುಪತಿಯಲ್ಲಿ ರಾಮಾಯಣ ಓದಿ ಅದರ ಸಂದೇಶವನ್ನು ಲೋಕಕ್ಕೆ ನೀಡಿದ್ದರು. ಈಗ ಅದೇ ಕೆಲಸ ‘ಆದಿಪುರುಷ್’ ಚಿತ್ರತಂಡ ಮಾಡುತ್ತಿದೆ’ ಎಂದು ಶ್ಲಾಘಿಸಿದರು.
ಚಿತ್ರದಲ್ಲಿ ಜಾನಕಿ ಪಾತ್ರದಲ್ಲಿ ಅಭಿನಯಿಸಿರುವ ಕೃತಿ ಸನನ್ ‘ಒಂಬತ್ತು ವರ್ಷಗಳ ಹಿಂದೆ ತೆಲುಗು ಸಿನಿಮಾದಲ್ಲೇ ಡೆಬ್ಯೂ ಮಾಡಿದ್ದೆ. ಈಗ ಒಂದು ಪವರ್‌ುಲ್ ಪಾತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಮರಳಿದ್ದು ಸಂತಸ’ ಎಂದರು. ಭಜರಂಗ್ ಪಾತ್ರದಲ್ಲಿ ದೇವದತ್ ನಾಗೆ ಹಾಗೂ ಶೇಷ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸಿದ್ದು, ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ‘ಆದಿಪುರುಷ್’ ಜೂನ್ 16ರಂದು ದೇಶಾದ್ಯಂತ ತೆರೆಕಾಣಲಿದೆ.
ಹೊಸ ಟ್ರೇಲರ್ ಬಿಡುಗಡೆ:
ಪ್ರೀ ರಿಲೀಸ್ ಇವೆಂಟ್‌ನಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಚಿತ್ರಕ್ಕೆ ಸಂಗೀತ ನೀಡಿದ ಅಜಯ್-ಅತುಲ್ ಅವರಿಂದ 'ಜೈ ಶ್ರೀರಾಮ್' ಹಾಡು, ನೃತ್ಯ ಎಲ್ಲದರ ಜತೆ ಚಿತ್ರದ ಹೊಸ ಹಾಡನ್ನು ಬಿಡುಗಡೆ ಮಾಡಲಾಯಿತು. ಹರಿಚರಣ್ ಹಾಡಿರುವ 'ಶಿವೋಹಮ್' ಎಂಬ ಹೊಸ ಹಾಡನ್ನು ಸ್ವತಃ ಅವರೇ ಹಾಡುವ ಮೂಲಕ ಅನಾವರಣಗೊಳಿಸಿದರು. ಅಲ್ಲದೆ, ನಟ ಪ್ರಭಾಸ್ ಚಿತ್ರದ ಹೊಸ ಹಾಗೂ ಕೊನೆಯ ಟ್ರೇಲರ್ ಬಿಡುಗಡೆ ಮಾಡಿದರು.
ಇಲ್ಲಿಯೇ ಮದುವೆಯಾಗುವೆ:
ಸದ್ಯ ‘ಆದಿಪುರುಷ್’, ‘ಸಲಾರ್’ ಹಾಗೂ ‘ಪ್ರಾಜೆಕ್ಟ್ ಕೆ’ ಸಿನಿಮಾಗಳಲ್ಲಿ ಪ್ರಭಾಸ್ ಬಿಜಿಯಿದ್ದಾರೆ. ಆದರೆ, ಪ್ರಭಾಸ್ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ. ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಅಭಿಮಾನಿಗಳಿಂದ ಕೇಳಿ ಬಂದ ‘ಡಾರ್ಲಿಂಗ್ ಪ್ರಭಾಸ್ ಮದುವೆ ಯಾವಾಗ?’ ಎಂಬ ಪ್ರಶ್ನೆಗೆ ‘ನಾನು ಮದುವೆಯಾದರೆ ತಿರುಪತಿಯಲ್ಲಿಯೇ ಆಗೋದು’ ಎಂದು ಉತ್ತರಿಸಿದರು ಪ್ರಭಾಸ್.
ಆಂಜನೇಯನಿಗೆ ಮೀಸಲು:
ಅದ್ಧೂರಿಯಾಗಿ ನಡೆದ ‘ಆದಿಪುರುಷ್’ ಪ್ರೀ ರಿಲೀಸ್ ಕಾರ್ಯಕ್ರಮ ಭಾವುಕ ಕ್ಷಣಗಳಿಗೂ ಸಾಕ್ಷಿಯಾಯಿತು. ಚಿತ್ರದ ನಿರ್ದೇಶಕ ಓಂ ರಾವುತ್, ‘ಇದು ಕೇವಲ ನನ್ನ ಚಿತ್ರ ಅಲ್ಲ, ಇಡೀ ಭಾರತದ ಚಿತ್ರ. ಎಲ್ಲಿಯೇ ರಾಮಕಥೆ ನಡೆದರು ಅಲ್ಲಿ ಹನುಮಂತ ಇರುತ್ತಾನೆ ಎಂದು ನನ್ನ ತಾಯಿ ಹೇಳುತ್ತಿದ್ದರು. ಹೀಗಾಗಿ ‘ಆದಿಪುರುಷ್’ ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್‌ನಲ್ಲಿ, ಪ್ರತಿ ಶೋನಲ್ಲಿ ಒಂದು ಸೀಟನ್ನು ಆಂಜನೇಯನಿಗಾಗಿ ಖಾಲಿ ಬಿಡಲಾಗುತ್ತದೆ’ ಎಂದು ಹೇಳುವಾಗ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು.