ADHIPATHRA MOVIE REVIEW: ಎರಡು ಕೊಲೆಯೂ, ಗಗ್ಗರಬೆಟ್ಟದ ರಹಸ್ಯವೂ...

ADHIPATRA
Published on

ಬೆಂಗಳೂರು: ಕಾಡಿನ ಮಧ್ಯೆ ಇರುವ ಊರು ಶಿವಪುರ. ಈ ಗ್ರಾಮದ ಪೊಲೀಸ್ ಅಧಿಕಾರಿ ಹಠಾತ್ತನೆ ಮರಣ ಹೊಂದುತ್ತಾರೆ. ಇದು ಆಕಸ್ಮಿಕವೋ? ಅಥವಾ ಕೊಲೆಯೋ ಎಂಬುದನ್ನು ತನಿಖೆ ನಡೆಸಲು ಆ ಠಾಣೆಗೆ ಬರುವವರೇ ಆತ್ರೇಯ (ರೂಪೇಶ್ ಶೆಟ್ಟಿ). ಈ ಪ್ರಕರಣ ತನಿಖೆ ನಡೆಸುತ್ತಿರುವಾಗಲೇ ಪತ್ರಕರ್ತ ಬಲರಾಮ (ಪ್ರಶಾಂತ್ ನಟನ) ಸಾವಿಗೀಡಾಗುತ್ತಾರೆ. ಬಳಿಕ ಈ ಎರಡೂ ಕೊಲೆಗಳ ಪ್ರಕರಣದ ತನಿಖೆ ಚುರುಕುಗೊಳ್ಳುತ್ತದೆ. ದಿನಕ್ಕೊಂದು ರೀತಿಯಲ್ಲಿ ಈ ಕೇಸ್ ತಿರುವು ಪಡೆದುಕೊಳ್ಳುತ್ತಾ ಕೊನೆಗೆ ಗಗ್ಗರಬೆಟ್ಟಕ್ಕೆ ನಿಲ್ಲುತ್ತದೆ. ಹೀಗೆ ಎರಡು ಕೊಲೆ ಹಾಗೂ ಗಗ್ಗರಬೆಟ್ಟದ ರಹಸ್ಯದೊಂದಿಗೆ ‘ಅಧಿಪತ್ರ’ ಕಥೆ ತೆರೆದುಕೊಳ್ಳುತ್ತದೆ. ನಿರ್ದೇಶಕ ಚಯನ್ ಶೆಟ್ಟಿ ಕ್ರೈಂ, ಸ್ಪಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಉತ್ತಮ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನಷ್ಟು ರೋಚಕವಾಗಿ ನಿರೂಪಿಸಿದ್ದರೆ, ಪ್ರೇಕ್ಷಕರನ್ನು ಮತ್ತಷ್ಟು ಸೀಟಂಚಲ್ಲಿ ಕೂರಿಸಬಹುದಿತ್ತು. ಪ್ರಾರಂಭದಿಂದ ಕ್ಲೈಮ್ಯಾಕ್ಸ್‌ವರೆಗೂ ರೂಪೇಶ್ ಶೆಟ್ಟಿ ತನಿಖೆಯಲ್ಲಿಯೇ ಸಾಗುತ್ತಾರೆ. ಅಲ್ಲಲ್ಲಿ ಟ್ವಿಸ್ಟ್, ಟರ್ನ್‌ಗಳಿದ್ದರೂ ಸ್ವಲ್ಪ ಲೆಂಥಿ ಎನಿಸಬಹುದು. ಪೊಲೀಸ್ ಪಾತ್ರದಲ್ಲಿ ರೂಪೇಶ್ ಶೆಟ್ಟಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಖಾಕಿಯಲ್ಲಿ ಅವರ ಗತ್ತು, ಹಾವ-ಭಾವ, ಮ್ಯಾನರಿಸಂ ಗಮನ ಸೆಳೆಯುತ್ತದೆ. ತನಿಖಾ ಪತ್ರಕರ್ತೆಯ ಪಾತ್ರಕ್ಕೆ ಜಾಹ್ನವಿ ನ್ಯಾಯ ಒದಗಿಸಿದ್ದಾರೆ. ಕೋಸ್ಟಲ್‌ವುಡ್ ಪ್ರತಿಭೆಗಳಾದ ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ ಹಾಸ್ಯದ ಮೂಲಕ ರಂಜಿಸುತ್ತಾರೆ. ಕರಾವಳಿ ಭಾಗದ ಸೊಗಡಿನ ಚಯನ್ ಶೆಟ್ಟಿ ಸಂಭಾಷಣೆ ಆಪ್ತ ಎನಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net