ದೇಶದ ಅರ್ಧದಷ್ಟು ಜನರು ನನ್ನನ್ನು ಕೊಲ್ಲಲು ಬಯಸಿದ್ದರು: ನಟಿ ಅದಾ ಶರ್ಮಾ ಶಾಕಿಂಗ್​ ಹೇಳಿಕೆ! Adah Sharma

Adah Sharma
Published on

ಮುಂಬೈ: 2015ರಲ್ಲಿ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಮತ್ತು ಪವನ್​ ಒಡೆಯರ್ ಕಾಂಬಿನೇಷನ್​ನಲ್ಲಿ ‘ರಣವಿಕ್ರಮ’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಯವಾದ ನಟಿ ಯಾರೆಂದರೆ ಅವರೇ ಹಾಟ್​ ಬ್ಯೂಟಿ ಅದಾ ಶರ್ಮಾ ( Adah Sharma ).

ನೀಳ ಮೈಮಾಟ ಮತ್ತು ಹಾಲಿನ ಬಣ್ಣದ ಚೆಲುವೆಯನ್ನು ಅಷ್ಟೇ ಪ್ರೀತಿಯಿಂದ ನಮ್ಮ ಕನ್ನಡಿಗರು ಸ್ವಾಗತಿಸಿದರು. ಆ ಎರಡು ಸಿನಿಮಾಗಳ ಬಳಿಕ ಅದಾ ಅವರು ಮತ್ತೆ ಕನ್ನಡಕ್ಕೆ ವಾಪಾಸ್ಸಾಗಲೇ ಇಲ್ಲ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ತೊಡಗಿಸಿಕೊಂಡರಾದರೂ, ಬೆರಳಣಿಕೆ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದೀಗ ಬೇರೆ ಭಾಷೆಗಳಲ್ಲೂ ಅದಾ ಅವರು ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಅದಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್​ ಆಗಿರುತ್ತಾರೆ. ತಮ್ಮ ಬೋಲ್ಡ್​ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಅಂದಹಾಗೆ, ಅದಾ ಅವರ "ದಿ ಕೇರಳ ಸ್ಟೋರಿ" ಬಿಡುಗಡೆಯಾದಾಗ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಹಾಗಾದರೂ ಬಾಕ್ಸ್​ ಆಫೀಸ್​ನಲ್ಲಿ ಭಾರಿ ಯಶಸ್ಸು ಸಹ ಕಂಡಿತು. ಕೇರಳ ಸ್ಟೋರಿ ಚಿತ್ರದ ಮೂಲಕ ಅದಾ ಅವರು ರಾತ್ರೋರಾತ್ರಿ ಸ್ಟಾರ್ ನಾಯಕಿ ಕೂಡ ಆದರು. ಇದಾದ ನಂತರ, ಅದಾ ಅವರು ವಿವಾದಾತ್ಮಕ ಚಿತ್ರಗಳಲ್ಲಿ ನಟಿಸುತ್ತಲೇ ಬರುತ್ತಿದ್ದಾರೆ.

2023ರಲ್ಲಿ ದಿ ಕೇರಳ ಸ್ಟೋರಿಯಲ್ಲಿ ನಟನೆ ಮಾಡಿದ ಅದಾ, 2024ರಲ್ಲಿ ಬಸ್ತಾರ್​: ದಿ ನಕ್ಸಲ್​ ಸ್ಟೋರಿಯಲ್ಲಿ ನಟಿಸಿದರು. ಈ ಸಿನಿಮಾ ಕೂಡ ತುಂಬಾ ವಿವಾದಕ್ಕೆ ಗುರಿಯಾಯಿತು. ಅಲ್ಲದೆ, ಈ ಸಿನಿಮಾ ಫ್ಲಾಪ್​ ಕೂಡ ಆಯಿತು. ಸಾಲು ಸಾಲು ವಿವಾದಗಳಲ್ಲಿ ಸಿಲುಕಿದ ಅದಾ, ಅನೇಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಚಾರವಾಗಿ ಇತ್ತೀಚೆಗೆ ಮಾತನಾಡಿದ ಅದಾ, ದೇಶದ ಅರ್ಧದಷ್ಟು ಮಂದಿ ನನ್ನನ್ನು ಕೊಲ್ಲಲ್ಲು ಬಯಸಿದ್ದರು. ಅದೇ ರೀತಿ ಅರ್ಧ ಮಂದಿ ನನ್ನ ರಕ್ಷಿಸಲು ಮುಂದಾಗಿದ್ದರು ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಇಂಡಿಯಾ ಟುಡೆ ಸಂದರ್ಶನದಲ್ಲಿ ಮಾತನಾಡಿದ ಅದಾ, ನಾನು '1920' ಹೆಸರಿನ ಹಾರರ್​ ಸಿನಿಮಾದಿಂದ ನನ್ನ ಸಿನಿ ವೃತ್ತಿ ಜೀವನವನ್ನು ಪ್ರಾರಂಭಿಸಿದೆ. ಆ ಸಿನಿಮಾ ಇಂದಿಗೂ ನನ್ನ ಅತ್ಯಂತ ಧೈರ್ಯಶಾಲಿ ಚಿತ್ರವೆಂದು ಭಾವಿಸುತ್ತೇನೆ. ಆ ಸಮಯದಲ್ಲಿ ಸಿನಿ ಜಗತ್ತು ಹೇಗಿತ್ತು ಎಂದರೆ, ನನ್ನ ಲುಕ್​ ಚೆನ್ನಾಗಿರಬೇಕೆಂದು ಮತ್ತು ಹಾಟ್​ ಆಗಿ ಕಾಣಬೇಕೆಂದು ಬಯಸಿತು. ಬಾಲಿವುಡ್​ನ ಸಿದ್ಧ ಸೂತ್ರಗಳಿಗೆ ಅಂಟಿಕೊಳ್ಳುವಂತೆ ಕೇಳಿತು. ಆದರೆ, ನಾನು ಯಾವಾಗಲೂ ಚಿತ್ರಕತೆ ಮತ್ತು ನನ್ನ ಪಾತ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ಅದಾ ಹೇಳಿದರು.

ನಾನು ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದೆ. ಹೀಗಿರುವಾಗ ದಿ ಕೇರಳ ಸ್ಟೋರಿ ನನ್ನ ನಿರೀಕ್ಷೆಗಳನ್ನು ಪೂರೈಸಿತು. ಈ ಚಿತ್ರದೊಂದಿಗೆ ನನ್ನ ವೃತ್ತಿಜೀವನವೇ ಬದಲಾಯಿತು. ಇದಾದ ನಂತರ, ನಾನು ಬಸ್ತಾರ್: ದಿ ನಕ್ಸಲ್ ಸ್ಟೋರಿ ಸಿನಿಮಾದಲ್ಲಿ ನಟಿಸಿದೆ. ಈ ಎರಡೂ ಸಿನಿಮಾಗಳು ಭಾರಿ ವಿವಾದ ಸೃಷ್ಟಿಸಿದವು. ಈ ಕಾರಣದಿಂದಾಗಿ, ದೇಶದ ಅರ್ಧದಷ್ಟು ಜನರು ನನ್ನನ್ನು ಕೊಲ್ಲಲು ಬಯಸಿದ್ದರು. ಉಳಿದ ಅರ್ಧ ಜನರು ನನ್ನ ಮೇಲೆ ಹೊಗಳಿಕೆಯ ಸುರಿಮಳೆಗೈದರು ಎಂದು ಅದಾ ಹೇಳಿದ್ದಾರೆ.

ನಿಜ ಹೇಳಬೇಕೆಂದರೆ, ದೇಶದ ಅರ್ಧ ಜನರಿಂದಲೇ ನಾನಿಂದು ಜೀವಂತವಾಗಿದ್ದೇನೆ. ನಾವು ರಿಸ್ಕ್ ತೆಗೆದುಕೊಂಡಾಗ ಮಾತ್ರ ನಮ್ಮ ಹೆಸರು ಕೇಳಿಬರುತ್ತದೆ. ನಾನು ಯಾವಾಗಲೂ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡುತ್ತೇನೆ. ಅದರಲ್ಲಿ ಆಕ್ಷನ್ ಇರಬೇಕು ಮತ್ತು ಭಾವನೆಗಳು ಇರಬೇಕು. ನನ್ನ ಕುಟುಂಬ ಅಂತಹ ಸಿನಿಮಾಗಳನ್ನು ನೋಡಿದಾಗ, ಅವರು ನನ್ನ ಬಗ್ಗೆ ಚಿಂತಿಸಬೇಕು. ಅಂತಹದ್ದೇನೂ ಇಲ್ಲದಿದ್ದರೆ, ಅದು ನಟನೆಯೇ ಅಲ್ಲ ಎಂದು ಅದಾ ಹೇಳಿದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಅದಾ ಅವರು ಕೊನೆಯದಾಗಿ 'ತುಮ್ಕೋ ಮೇರಿ ಕಸಮ್' (2025) ಸಿನಿಮಾದಲ್ಲಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡರು. ಶೀಘ್ರದಲ್ಲೇ 'ರೀತಾ ಸನ್ಯಾಲ್ ಸೀಸನ್ 2' ಎಂಬ ಕಾನೂನು ಥ್ರಿಲ್ಲರ್ ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net