ನಟಿ ವಿಜಯಲಕ್ಷ್ಮೀಗೆ ಮತ್ತೊಂದು ಸಂಕಷ್ಟ; ಸಹೋದರಿಗಾಗಿ ಶಿವಣ್ಣನ ಸಹಾಯ ಯಾಚನೆ..

Feature
Published on

ಬೆಂಗಳೂರು: ಈ ಹಿಂದೆ ಅನಾರೋಗ್ಯಕ್ಕೀಡಾಗಿ ಸಂಕಷ್ಟವನ್ನು ಎದುರಿಸಿ ಚೇತರಿಸಿಕೊಂಡಿರುವ ನಟಿ ವಿಜಯಲಕ್ಷ್ಮೀಗೆ ಮತ್ತೊಂದು ಸಂಕಟ ಎದುರಾಗಿದೆ. ಈ ಸಲ ಅವರ ಸಹೋದರಿ ಉಷಾ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ನಟಿ ವಿಜಯಲಕ್ಷ್ಮೀ ಚಿತ್ರರಂಗದ ಹಿರಿಯ ನಟರಿಂದ ಸಹಾಯವನ್ನು ಯಾಚಿಸಿದ್ದಾರೆ.

ಕನ್ನಡದಲ್ಲಿ 'ನಾಗಮಂಡಲ', 'ಸೂರ್ಯವಂಶ' ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರಿಂದ ಗುರುತಿಸಿಕೊಂಡಿರುವ ನಟಿ ವಿಜಯಲಕ್ಷ್ಮೀ ಅವರ ಸಹೋದರಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಷಾಗೆ ಗರ್ಭಕೋಶದಲ್ಲಿ ಗಡ್ಡೆಗಳಾಗಿದ್ದು, ಇತ್ತೀಚೆಗೆ ಸರ್ಜರಿ ಮೂಲಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಚೇತರಿಸಿಕೊಂಡಿದ್ದ ಅವರನ್ನು ಮನೆಗೆ ಕರೆತರಲಾಯಿತಾದರೂ ಆಕೆ ಮತ್ತೆ ಅನಾರೋಗ್ಯಗೊಂಡಿದ್ದರಿಂದ ಪುನಃ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಸರಿಯಾಗಿ ಅನ್ನ-ನೀರು ಕೂಡ ಸೇವಿಸುತ್ತಿಲ್ಲ, ಮರೆವು ಕೂಡ ಕಾಡುತ್ತಿದ್ದು, ತೀವ್ರ ನಿತ್ರಾಣಗೊಂಡಿದ್ದಾರೆ ಎಂದು ಸಹೋದರಿಯ ಅನಾರೋಗ್ಯ ಕುರಿತು ವಿಡಿಯೋ ಮೂಲಕ ಕೋರಿಕೊಂಡಿದ್ದಾರೆ.

ಸಹೋದರಿಯ ಅನಾರೋಗ್ಯದ ಕಾರಣದಿಂದ ತಾವು ತೀವ್ರ ಒತ್ತಡದಲ್ಲಿದ್ದು, ಆರ್ಥಿಕ ಸಮಸ್ಯೆಯೂ ಕಾಡುತ್ತಿದೆ. ನನ್ನ ಈ ಪರಿಸ್ಥಿತಿ ಕುರಿತು ಕನ್ನಡ ಚಿತ್ರರಂಗದ ಶಿವಣ್ಣ ಅವರ ಗಮನಕ್ಕೆ ತಂದು ನೆರವಾಗಬೇಕು. ಶಿವಣ್ಣ ಮುಂತಾದ ಹಿರಿಯ ನಟರು ಚೆನ್ನೈನಲ್ಲಿರುವ ರಜನಿಕಾಂತ್ ಮುಂತಾದ ಹಿರಿಯ ನಟರಿಗೆ ಹೇಳಿದರೆ ನನಗೆ ಸಹಾಯವಾಗುತ್ತದೆ ಎಂಬುದಾಗಿ ಅವರು ಕೋರಿಕೊಂಡಿದ್ದಾರೆ. ಸದ್ಯ ಎಲ್ಲರೂ ಕಷ್ಟದಲ್ಲಿದ್ದಾರೆ, ಯಾರಿಂದಲೂ ಸಹಾಯ ಕೇಳಲು ಬೇಸರವಾಗುತ್ತದೆ ಎಂದಿರುವ ಅವರು ಕರ್ನಾಟಕದ ಚಿತ್ರರಂಗದ ಗಣ್ಯರು, ಅಭಿಮಾನಿಗಳಿಂದ ಸಹಾಯದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net