

ವಿಶ್ವದ ಅತ್ಯಂತ ದುಬಾರಿ ಐಶಾರಾಮಿ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಕಲಿನನ್ ಕೂಡ ಒಂದು. ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆ 10 ಕೋಟಿ ರೂಪಾಯಿಯಿಂದ 12.30 ಕೋಟಿ ರೂಪಾಯಿ ಇದೆ. ರೋಲ್ಸ್ ರಾಯ್ಸ್ ಕಾರುಗಳೆಂದರೆ ಶ್ರೀಮಂತಿಕೆ ಮತ್ತು ಪ್ರತಿಷ್ಠೆಯ ಸಂಕೇತ. ಹೀಗಾಗಿಯೇ ಮುಕೇಶ್ ಅಂಬಾನಿ, ಅಮಿತಾಭ್ ಬಚ್ಚನ್, ಶಾರುಖ್ ಖಾನ್, ವಿವೇಕ್ ಓಬೆರಾಯ್, ಅಲ್ಲು ಅರ್ಜುನ್, ಅಜಯ್ ದೇವ್ಗನ್ ಸೇರಿ ಕೆಲವೇ ಉದ್ಯಮಿಗಳು, ಸಿನಿಮಾ ತಾರೆಯರು ಈ ಕಾರನ್ನು ಖರೀದಿಸಿದ್ದಾರೆ.
ಇದೀಗ ಈ ಸಾಲಿಗೆ ಕನ್ನಡದ "ಐರಾವತ' ಚಿತ್ರದಲ್ಲೂ ನಟಿಸಿರುವ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಕೂಡ ಸೇರಿಕೊಂಡಿದ್ದಾರೆ. ಆ ಮೂಲಕ ದುಬಾರಿ ರೋಲ್ಸ್ ರಾಯ್ಸ್ ಕಲಿನನ್ ಖರೀದಿಸಿರುವ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಖರೀದಿಸಿರುವ ರೋಲ್ಸ್ ರಾಯ್ಸ್ ಕಲಿನನ್ ಮಾಡೆಲ್ ಬೆಲೆ 12 ಕೋಟಿ ರೂಪಾಯಿ ಎನ್ನಲಾಗಿದೆ. ಊರ್ವಶಿ ತಮ್ಮ ಐಶಾರಾಮಿ ಜೀವನದಿಂದ ಆಗಾಗ ಸುದ್ದಿಯಾಗುತ್ತಿರುತ್ತಾರೆ.
ಕಳೆದ ವರ್ಷದ ಹುಟ್ಟುಹಬ್ಬಕ್ಕೆ ಅವರು 3 ಕೋಟಿ ರೂಪಾಯಿ ಬೆಲೆಯ ಚಿನ್ನದ ಕೇಕ್ ಕತ್ತರಿಸುವ ಮೂಲಕ ಸದ್ದು ಮಾಡಿದ್ದರು. ಹಾಗೇ "ಡಾಕು ಮಹಾರಾಜ್' ಪ್ರಚಾರದ ವೇಳೆ ವಜ್ರದ ಉಂಗುರ ಮತ್ತು ಸರ ಪ್ರದರ್ಶಿಸಿದ್ದರು. ಇದೀಗ ರೋಲ್ಸ್ ರಾಯ್ಸ್ ಕಲಿನನ್ ಖರೀದಿಸುವ ಮೂಲಕ ಮತ್ತೊಮ್ಮೆ ರಾಯಲ್ ಜೀವನದ ಝಲಕ್ ನೀಡಿದ್ದಾರೆ. ಸದ್ಯ ಅವರು "ಬ್ಲ್ಯಾಕ್ ರೋಸ್', "ವೆಲ್ಕಮ್ ಟು ದ ಜಂಗಲ್' ಮತ್ತು "ಕಸೂರ್ 2' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.