

Actress Trisha : ಬಹುಭಾಷ ನಟಿ ತ್ರಿಷಾ ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್, ಸೂರ್ಯ, ವಿಕ್ರಮ್, ಪ್ರಭಾಸ್, ಚಿರಂಜೀವಿ, ಅಜಿತ್, ಸಿಂಬು ಸೇರಿದಂತೆ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್ ರಾಜ್ಕುಮಾರ್ ಅಭಿನಯದ ಪವರ್ಸ್ಟಾರ್ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ತ್ರಿಷಾ ಭಾರತದ ಚಿತ್ರರಂಗದ ಸಾರ್ವಕಾಲಿಕ ರಾಣಿ. ಹೆಚ್ಚು ಗಾಸಿಪ್ಗಳಲ್ಲಿ ಕಾಣಿಸಿಕೊಳ್ಳದ ನಟಿ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ತ್ರಿಷಾ, 41 ವರ್ಷ ವಯಸ್ಸಾದರೂ ಇನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ.
ಈ ಹಿಂದೆ ನಟ ಸಿಂಬು ಮತ್ತು ರಾಣ ದಗ್ಗುಬಾಟಿ ಅವರ ಜೊತೆ ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದು ವದಂತಿಯಾಗಿಯೇ ಉಳಿಯಿತು. ಇದರ ನಡುವೆ ತ್ರಿಷಾ ಅವರು 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇದು ಬಹಳ ಸುದ್ದಿಯಾಗಿತ್ತು. ಅಲ್ಲದೆ, ನಿಶ್ಚಿತಾರ್ಥದ ಫೋಟೋಗಳು ಸಹ ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಆದರೆ, ಇಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ, ಏಕಾಏಕಿ ಇಬ್ಬರೂ ಬೇರ್ಪಟ್ಟರು! ಮದುವೆಯೂ ನಿಂತುಹೋಯಿತು.
ಕಳೆದ ಕೆಲವು ದಿನಗಳಿಂದ ತ್ರಿಷಾ ಮತ್ತು ನಟ ವಿಜಯ್ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಆದರೆ, ತ್ರಿಷಾ ಆಗಲಿ ಅಥವಾ ವಿಜಯ್ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರಿಬ್ಬರು ಆಪ್ತ ಸ್ನೇಹಿತರು ಎಂಬ ಮಾತಿದೆ. ಇದರ ನಡುವೆ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ. ಅದೇನೆಂದರೆ, ತ್ರಿಷಾ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಮದುವೆ ಮಾಹಿತಿಯನ್ನು ಸಿಯಾಸತ್ ಎಂಬ ಜಾಲತಾಣ ವರದಿ ಮಾಡಿದೆ. ತ್ರಿಷಾ ಅವರನ್ನು ವರಿಸುವ ವರ ಚಂಡೀಗಢ ಮೂಲದ ಉದ್ಯಮಿ ಎಂದು ಹೇಳಲಾಗುತ್ತಿದೆ. ತ್ರಿಷಾ ಅವರ ಕುಟುಂಬವು ವರ್ಷಗಳಿಂದಲೂ ವರನ ಕುಟುಂಬದೊಂದಿಗೆ ಆತ್ಮೀಯವಾಗಿದೆ ಎಂಬ ಮಾಹಿತಿ ಇದೆ. ಸರಿಯಾದ ವ್ಯಕ್ತಿ ಸಿಕ್ಕರೆ ಮದುವೆಯಾಗಲು ಸಿದ್ಧ ಎಂದು ತ್ರಿಷಾ ಇತ್ತೀಚೆಗಷ್ಟೇ ಹೇಳಿದ್ದರು. ಇದೀಗ ಮದುವೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಆದರೆ, ವಿವಾಹದ ಸುದ್ದಿಗೆ ತ್ರಿಷಾ ಆಗಲಿ ಅವರ ಪಾಲಕರಾಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಂದಹಾಗೆ, ತ್ರಿಷಾ ಅವರು 2015 ರಲ್ಲಿ ಉದ್ಯಮಿ ವರುಣ್ ಮಣಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು ಆದರೆ, ಅವರ ಮದುವೆ ನಡೆಯಲಿಲ್ಲ. ಮದುವೆಯ ನಂತರವೂ ನಟನೆಯನ್ನು ಮುಂದುವರಿಸುವ ತ್ರಿಷಾ ಅವರ ಬಯಕೆಯನ್ನು ವರುಣ್ ವಿರೋಧಿಸಿದರು ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾದವು ಎಂದು ಆ ಸಮಯದಲ್ಲಿ ಮಾಧ್ಯಮಗಳು ವರದಿ ಮಾಡಿದ್ದವು. (ಏಜೆನ್ಸೀಸ್)