ಹೆಬ್ಬೆಟ್ ರಾಮಕ್ಕ ತಂಡಕ್ಕೆ ಅಭಿನಂದನೆ

Hebbet Ramakka
Published on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಪತ್ರಿಕೆಗಳು ಸದಾ ಪ್ರೋತ್ಸಾಹ ನೀಡುತ್ತಲೇ ಬಂದಿದ್ದು, ಚಿತ್ರರಂಗದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು ಎಂದು ನಟಿ ತಾರಾ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗಾಗಿ ಶನಿವಾರ ಕಲಾವಿದರ ಸಂಘದಲ್ಲಿ ತಾರಾ ಮತ್ತು ದೇವರಾಜ್ ಅಭಿನಯದ ‘ಹೆಬ್ಬೆಟ್ ರಾಮಕ್ಕ’ ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ನಮಾನ ಸ್ವೀಕರಿಸಿ ಮಾತನಾಡಿದ ಅವರು, ಸದಭಿರುಚಿಯ ಚಿತ್ರಗಳನ್ನು ನೀಡುವುದಕ್ಕೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ’ ಎಂದರು. ಕರ್ನಾಟಕ ರಾಜ್ಯ ಅರಣ್ಯ ನಿಗಮದ ಅಧ್ಯಕ್ಷರಾದ ಮೇಲೆ ಗಿಡ ಕೊಡುವ ಸಂಪ್ರದಾಯವನ್ನು ಬೆಳೆಸಿಕೊಂಡಿರುವುದಾಗಿ ಹೇಳಿದ ಅವರು, ಗಣ್ಯರಿಗೆ ಗಿಡಗಳನ್ನು ಕೊಟ್ಟು ಗೌರವಿಸಿದರು.

ನಂತರ ಮಾತನಾಡಿದ ‘ಹೆಬ್ಬೆಟ್ ರಾಮಕ್ಕ’ ಚಿತ್ರದ ನಿರ್ದೇಶಕ ಸಾಲಗಾಮೆ ನಂಜುಂಡೇಗೌಡ, ‘ಪಂಚಾಯತ್ ರಾಜ್ ಚುನಾವಣೆ ಸಂದರ್ಭದಲ್ಲಿ ಈ ಚಿತ್ರ ಹೆಚ್ಚು ಪ್ರಸ್ತುವಾಗಿದೆ. ಸಾಮಾಜಿಕ ಬದಲಾವಣೆ ತರಬೇಕು ಎನ್ನುವ ನಿಟ್ಟಿನಲ್ಲಿ ಪರಿಣಾಮಕಾರಿ ಚಿತ್ರ ನೀಡುವ ಪ್ರಯತ್ನ ಮಾಡಿದ್ದೇವೆ’ ಎಂದರು. ‘ವಿಜಯವಾಣಿ’ ಸಂಪಾದಕರಾದ ಕೆ.ಎನ್.ಚನ್ನೇಗೌಡ ಮಾತನಾಡಿ, ‘ಹೆಬ್ಬೆಟ್ ರಾಮಕ್ಕ’ ಚಿತ್ರ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಗ್ರಾ.ಪಂ. ಅಧ್ಯಕ್ಷೆಯಾಗಿದ್ದ ರಾಮಕ್ಕ ಚಿತ್ರದ ಅಂತ್ಯದಲ್ಲಿ ಶಾಸಕಿ ಆಗುವುದರಿಂದ ಚಿತ್ರದ ಮುಂದುವರೆದ ಭಾಗವನ್ನು ತೆರೆಗೆ ತರುವ ಪ್ರಯತ್ನವನ್ನು ಚಿತ್ರತಂಡ ಮಾಡಲಿ’ ಎಂದರು.

‘ಪ್ರಜಾವಾಣಿ’ ಪತ್ರಿಕೆಯ ಸಂಪಾದಕ ರವೀಂದ್ರ ಭಟ್ ಐನಕೈ, ‘ವಿಜಯ ಕರ್ನಾಟಕ’ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ‘ಹೊಸ ದಿಗಂತ’ ಸಂಪಾದಕ ವಿನಾಯಕ ಭಟ್, ‘ಡೆಕ್ಕನ್ ಹೆರಾಲ್ಡ್’ನ ಡೆಪ್ಯುಟಿ ಎಡಿಟರ್ ಬಿ.ಎಸ್. ಅರುಣ್, ಐಯುಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜನಯ್ಯ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ನಿರ್ವಪಕರಾದ ಪುಟ್ಟರಾಜು, ಕವಿತಾ ರಾಜುರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net