ಪಾಲಿಗೆ ಬಂದಿದ್ದು ಪಂಚಾಮೃತ: ಹಿರಿಯ ನಟರ ಚಿತ್ರಗಳಿಗೆ ತಮನ್ನಾ ಸೈ

Tamanna Bhatia
Published on

ಟಾಲಿವುಡ್​ನ ಟಾಪ್​ ಐದು ನಟಿಯರ ಪಟ್ಟಿಯಲ್ಲಿ ಅಥವಾ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ತಮನ್ನಾ ಭಾಟಿಯಾ ಹೆಸರು ಮಾಯವಾಗಿ ಕೆಲವು ವರ್ಷಗಳೇ ಆಗಿವೆ. ಆ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ, ಕೀರ್ತಿ ಸುರೇಶ್​, ರಾಕುಲ್​ ಪ್ರೀತ್​ ಸಿಂಗ್​ ಮುಂತಾದವರ ಹೆಸರುಗಳೇ ಕಂಡುಬರುತ್ತವೆ. ತಮನ್ನಾಗೆ ಒಂದರ್ಥದಲ್ಲಿ ಮುಂಚಿಗಿಂತ ಬೇಡಿಕೆ ಕಡಿಮೆಯಾದರೂ, ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ಸೀನಿಯರ್​ ನಟರ ಚಿತ್ರಗಳೆಂದರೆ, ನಿರ್ಮಾಪಕರು ಮೊದಲು ಬುಕ್​ ಮಾಡುವುದು ತಮನ್ನಾ ಅವರನ್ನು. ಏಕೆಂದರೆ, ಚಿರಂಜೀವಿ, ನಾಗಾರ್ಜುನ, ವೆಂಕಟೇಶ್​ ಮುಂತಾದ 60 ಪ್ಲಸ್​ ನಟರಿಗೆ ಸದ್ಯಕ್ಕೆ ನಾಯಕಿಯರು ಸಿಗುತ್ತಿಲ್ಲ.

ತಮನ್ನಾ ಸಹ ಒಂದರ್ಥದಲ್ಲಿ ಚಿತ್ರರಂಗದಲ್ಲಿ ಹಿರಿಯರಾಗಿರುವ ಕಾರಣ, ಅವರನ್ನು ಸೀನಿಯರ್​ ನಟರಿಗೆ ನಾಯಕಿಯಾಗಿ ಪರಿಗಣಿಸಲಾಗುತ್ತಿದೆ. ಇದರಿಂದ ತಮನ್ನಾಗೆ ಬೇಸರವೇನೂ ಇದ್ದಂತಿಲ್ಲ. ಹಿರಿಯರಾದರೇನು ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಅದಕ್ಕೆ ಸರಿಯಾಗಿ ಸಂಭಾವನೆಯನ್ನೂ ಏರಿಸಿಕೊಳ್ಳುತ್ತಿದ್ದಾರೆ. ತಮನ್ನಾಗೆ ಸದ್ಯಕ್ಕೆ ಒಂದೂವರೆ ಕೋಟಿ ರೂ.ಗಳಷ್ಟು ಸಂಭಾವನೆ ಸಿಗುತ್ತಿದೆಯಂತೆ. ಆದರೆ, ಹಿರಿಯ ನಟರ ಎದುರು ನಟಿಸುವುದಕ್ಕೆ ತಮನ್ನಾ 2ರಿಂದ 2.5 ಕೋಟಿ ರೂ.ಗಳವರೆಗೂ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅವರು ಚಿರಂಜೀವಿ ಅಭಿನಯದ "ಭೋಲಾ ಶಂಕರ್​' ಮತ್ತು ವೆಂಕಟೇಶ್​ ಅಭಿನಯದ "ಎ್​ 2' ಚಿತ್ರಗಳಲ್ಲಿ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಅವರು ನಾಗಾರ್ಜುನ ಚಿತ್ರಕ್ಕೂ ಆಯ್ಕೆಯಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಬಾಲಕೃಷ್ಣ ಮುಂತಾದವರ ಚಿತ್ರಗಳಲ್ಲೂ ತಮನ್ನಾ ನಾಯಕಿಯಾದರೆ ಆಶ್ಚರ್ಯವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net