

ಬೆಂಗಳೂರು: ‘ದೃಶ್ಯ’, ‘ಶಿವಾಜಿ ಸುರತ್ಕಲ್’, ‘ಭೀಮಸೇನ ನಳಮಹಾರಾಜ’ ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ್ದ ಆರೋಹಿ ನಾರಾಯಣ್ ಇದೀಗ ಸ್ವರೂಪಿಣಿ ಎಂಬ ಹೆಸರಿನ ಮೂಲಕ ಹೊಸ ಜರ್ನಿ ಆರಂಭಿಸಿದ್ದಾರೆ. ‘ದೃಶ್ಯ’ ಚಿತ್ರದಲ್ಲಿ ಆರೋಹಿ ನಾರಾಯಣ್ ಎಂದು ಚಿತ್ರರಂಗಕ್ಕೆ ಪರಿಚಯರಾಗಿದ್ದರು. ಆದರೆ, ಅವರ ಮೂಲ ಹೆಸರು ಸ್ವರೂಪಿಣಿ. ತಾಯಿಯ ಸಲಹೆ ಮೇರೆಗೆ ಅವರು ಇದೀಗ ಮತ್ತೆ ಸ್ವರೂಪಿಣಿ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಸದ್ಯ ಅವರು ಅನೀಶ್ ನಟಿಸಿ, ನಿರ್ದೇಶಿಸುತ್ತಿರುವ ‘ಲವ್ ಒಟಿಪಿ’ ಚಿತ್ರಕ್ಕೆ ನಾಯಕಿಯಾಗಿದ್ದು, ಇತ್ತೀಚೆಗೆ ನಟಿಯ ಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇದೇ ಖುಷಿಯಲ್ಲಿ ಸ್ವರೂಪಿಣಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. ‘ನನ್ನ ಹಿಂದಿನ ಸಿನಿಮಾ ‘ಮೂರನೇ ಕೃಷ್ಣಪ್ಪ’ ನಿರ್ದೇಶಕ ನವೀನ್ ರೆಡ್ಡಿ ಮತ್ತು ಅನೀಶ್ ಇಬ್ಬರೂ ಸ್ನೇಹಿತರು. ಅನೀಶ್ ಈ ಚಿತ್ರಕ್ಕೆ ನಾಯಕಿಯನ್ನು ಹುಡುಕುವಾಗ ನನ್ನ ಬಗ್ಗೆಯೂ ನವೀನ್ ಬಳಿ ವಿಚಾರಿಸಿದ್ದಾರೆ. ಕಾಕತಾಳಿಯ ಎಂಬಂತೆ ಅವರು ಕಥೆ ಮಾಡುವಾಗಲೇ ಒಮ್ಮೆ ಭೇಟಿ ಮಾಡಿದ್ದೆ. ಆಗ ಅವರು ಲುಕ್ ಟೆಸ್ಟ್ ಮಾಡಿದರು. ಪಾತ್ರಕ್ಕೆ ಒಪ್ಪುತ್ತೇನೆ ಎಂದು ತಂಡಕ್ಕೆ ಸ್ವಾಗತಿಸಿದರು. ಚಿತ್ರ ಕನ್ನಡದ ಜತೆ ತೆಲುಗಿನಲ್ಲೂ ಮೂಡಿಬರುತ್ತಿದ್ದು, ಎರಡೂ ಭಾಷೆಗಳಲ್ಲಿ ಹಿಡಿತವಿರುವುದು ಸಹ ನನ್ನ ಆಯ್ಕೆಗೆ ಇನ್ನೊಂದು ಕಾರಣ’ ಎಂದು ಚಿತ್ರತಂಡ ಸೇರಿದ ಬಗ್ಗೆ ಮಾಹಿತಿ ನೀಡಿದರು.
ಎರಡು ಶೇಡ್‌ಗಳ ಪಾತ್ರ: ಹೆಸರೇ ಹೇಳುವಂತೆ ‘ಲವ್ ಒಟಿಪಿ’ ಲವ್‌ಸ್ಟೋರಿಯಾಗಿದ್ದು, ಸ್ವರೂಪಿಣಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕಾಲೇಜು ಹುಡುಗಿ ಜತೆಗೆ ಮತ್ತೊಂದು ಶೇಡ್‌ಗಳಿರಲಿವೆ. ಕಾಲೇಜು ಹುಡುಗಿಯಾಗಲು ಲುಕ್ ಬದಲಿಸಿಕೊಂಡಿದ್ದೇನೆ. ಹೇರ್‌ಸ್ಟೈಲ್ ಚೇಂಜ್ ಆಗಿದ್ದು, ನನ್ನನ್ನು ಈ ಮೊದಲು ನೋಡಿದ್ದಕ್ಕಿಂತ ವಿಭಿನ್ನ ಅನಿಸಬಹುದು. ಜೀವನದಲ್ಲಿ ಸರಿ-ತಪ್ಪು ಏನೇ ನಡೆದರೂ ಆಗಿನ ಸಂದರ್ಭಕ್ಕನುಸಾರ ಅಷ್ಟೇ. ಅದನ್ನು ಸ್ವೀಕರಿಸುವುದು ಅವರವರ ಭಾವಕ್ಕೆ ಬಿಟ್ಟಿದ್ದು ಎನ್ನುವುದು ಈ ಕಥೆಯ ಸಾರ. ಬಹುಮಹಡಿ ಕಟ್ಟಡದ ಮೇಲೆ ಸವಾಲಿನ ದೃಶ್ಯದ ಶೂಟ್ ಮಾಡಿದ್ದೆವು. ಅದು ನಿಜಕ್ಕೂ ಭಯಾನಕ ಅನುಭವ. ಎಲ್ಲ ಸುರಕ್ಷತೆ ವಹಿಸಿದ್ದೆವು. ಆದರೂ ಮನುಷ್ಯನಿಗೆ ಭಯ ಸಹಜ’ ಎಂದು ಶೂಟಿಂಗ್ ಅನುಭವ ಹಂಚಿಕೊಂಡರು. ಸ್ವರೂಪಿಣಿ ‘ಲವ್ ಒಟಿಪಿ’ ಹೊರತುಪಡಿಸಿ ಇನ್ನೊಂದು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಆಗಲಿದೆ.