

ಮೊದಲ ತೆಲುಗು ಚಿತ್ರ ‘ಪೆಳ್ಳಿ ಸಂದಡಿ’ ದೊಡ್ಡ ಹಿಟ್ ಆಗದಿರಬಹುದು. ಆದರೆ, ಶ್ರೀಲೀಲಾಗೆ ತೆಲುಗಿನಲ್ಲಿ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ರವಿತೇಜ ಜತೆಗೆ ಶ್ರೀಲೀಲಾ, ‘ಧಮಾಕಾ’ ಎನ್ನುವ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ‘ಅನಗನಗಾ ಒಕ ರಾಜು’ ಎಂಬ ಚಿತ್ರದಲ್ಲೂ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಲ್ಲದೆ, ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವುದಕ್ಕೆ ಶ್ರೀಲೀಲಾ ಆಯ್ಕೆಯಾಗಿದ್ದಾರೆ.
ಸದ್ಯ ‘ಎಫ್ 3’ ಎಂಬ ಚಿತ್ರವನ್ನು ನಿರ್ದೇಶಿಸಿರುವ ಅನಿಲ್ ರಾವಿಪುಡಿ, ಬಾಲಕೃಷ್ಣ ಅವರಿಗಾಗಿ ಒಂದು ಪಕ್ಕಾ ಮಾಸ್ ಕಥೆಯನ್ನು ಬರೆದಿದ್ದಾರಂತೆ. ಈ ಚಿತ್ರದಲ್ಲಿ 20 ವರ್ಷದ ಹುಡುಗಿಯ ತಂದೆಯಾಗಿ ಬಾಲಯ್ಯ ಕಾಣಿಸಿಕೊಳ್ಳುತ್ತಿದ್ದು, ಅವರ ಮಗಳ ಪಾತ್ರ ಮಾಡುವುದಕ್ಕೆ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಯೊಂದು ಹೈದರಾಬಾದ್ನಿಂದ ಕೇಳಿಬಂದಿದೆ. ಈ ಚಿತ್ರವು ತಂದೆ-ಮಗಳ ಬಾಂಧವ್ಯದ ಕುರಿತಾದ ಚಿತ್ರವಾಗಿದ್ದು, ಸಾಕಷ್ಟು ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆಯಂತೆ. ಕಥೆ ಮತ್ತು ಪಾತ್ರವೇನೋ ಚೆನ್ನಾಗಿರಬಹುದು, ಆದರೆ ಶ್ರೀಲೀಲಾ ಒಪು್ಪತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.
ಏಕೆಂದರೆ, ಇದಕ್ಕೂ ಮುನ್ನ ತೆಲುಗಿನಲ್ಲಿ ಶ್ರೀಲೀಲಾಗೆ ಹಲವು ಚಿತ್ರಗಳಲ್ಲಿ ತಂಗಿ ಪಾತ್ರ ಮಾಡುವ ಅವಕಾಶ ಸಿಕ್ಕಿದೆ. ಆದರೆ, ಶ್ರೀಲೀಲಾ ಮಾತ್ರ ತಂಗಿ ಪಾತ್ರಗಳಿಗೆ ನೋ ಎಂದಿದ್ದಾರಂತೆ. ಹಾಗಿರುವಾಗ, ಬಾಲಯ್ಯ ಮಗಳಾಗಿ ಅವರು ನಟಿಸುತ್ತಾರಾ? ಈ ಪ್ರಶ್ನೆಗೆ ಅವರೇ ಉತ್ತರಿಸಬೇಕು.