

ಕರೊನಾ ಜಪದಿಂದ ಕ್ರಮೇಣ ಜನ ಹೊರಬರುತ್ತಿದ್ದಾರೆ. ಕ್ರಮೇಣ ಹಬ್ಬದ ಸೀಸನ್ಗೆ ಅಣಿಯಾಗುತ್ತಿದ್ದಾರೆ. ಮೊದಲ ಹಂತವಾಗಿ, ಗೌರಿ-ಗಣೇಶ ಹಬ್ಬದ ಸಂಭ್ರಮ ಇದೀಗ ಮನೆಮಾಡಿದ್ದು, ಇದಕ್ಕೆ ಕನ್ನಡ ಚಿತ್ರರಂಗ ಸಹ ಹೊರತಾಗಿಲ್ಲ. ಅದರಲ್ಲೂ ಸ್ಯಾಂಡಲ್ವುಡ್ ನಟಿಯರು ಗೌರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿಯ ಗೌರಿ ಹಬ್ಬ ಹೇಗಿರಲಿದೆ ಎಂಬುದನ್ನು ಶ್ರೀಲೀಲಾ ವಿಶೇಷವಾಗಿ ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.
ಗಣೇಶ ಹಬ್ಬ ಅಂದರೇ ಅದೊಂದು ಸಂಭ್ರಮ. ಚಿಕ್ಕಂದಿನಿಂದಲೂ ಎಲ್ಲ ಹಬ್ಬಗಳಿಗಿಂತ ಈ ಹಬ್ಬವನ್ನು ತುಂಬ ಖುಷಿಯಿಂದ ಆಚರಿಸುತ್ತ ಬಂದಿದ್ದೇನೆ. ಇದೀಗ ಎಲ್ಲೆಡೆ ಕರೊನಾ ಹಿನ್ನೆಲೆಯಲ್ಲಿ ಅದ್ದೂರಿತನ ಕಡಿಮೆ ಆಗಿದೆ ಅನಿಸಿದರೂ, ಮನೆಯಲ್ಲಿ ಮಾತ್ರ ಆ ಸಂಭ್ರಮ ಕಡಿಮೆ ಆಗುವುದಿಲ್ಲ. ಗಣೇಶ ಹಬ್ಬಕ್ಕೂ ಮುನ್ನ ಗೌರಿ ಹಬ್ಬ ಮಾಡಲಾಗುತ್ತದೆ. ಮದುವೆಯಾಗದಿರುವ ಹುಡುಗಿಯರು ಈ ಪೂಜೆ ಮಾಡಿದರೆ ಒಳ್ಳೆಯ ಗಂಡ ಸಿಗುತ್ತಾನೆಂಬ ನಂಬಿಕೆ ಇದೆ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಗೌರಿ ಪೂಜೆ ಮಾಡುವ ಸಂಪ್ರದಾಯ ಇದೆ. ಬೆಳಗ್ಗೆ ಬೇಗ ಎದ್ದು, ಮನೆ ಸ್ವಚ್ಛಗೊಳಿಸುವುದರಿಂದ ಹಿಡಿದು, ಎಲ್ಲ ಕೆಲಸದಲ್ಲೂ ಅಮ್ಮನಿಗೆ ಸಹಾಯ ಮಾಡುತ್ತೇನೆ. ಬಳಿಕ ಗೌರಿಯಂತೆ ನಾವೂ ಸಿಂಗಾರಗೊಂಡು, ಗೌರಿಯನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ಹೂವು ಹಣ್ಣುಗಳಿಂದ ಅಲಂಕಾರ ಮಾಡಿ, ಬಗೆಬಗೆಯ ಖಾದ್ಯಗಳನ್ನು ನೈವೇದ್ಯಕ್ಕಾಗಿ ತಯಾರಿಸುತ್ತೇವೆ. ಈ ಮೊದಲು ಸಂಬಂಧಿಕರೆಲ್ಲ ಮನೆಗೆ ಆಗಮಿಸುತ್ತಿದ್ದರು. ಇದೀಗ ಕರೊನಾ ಹಿನ್ನೆಲೆಯಲ್ಲಿ ಎಲ್ಲರೂ ಅವರವರ ಮನೆಯಲ್ಲಿಯೇ ಹಬ್ಬ ಮಾಡಿಕೊಳ್ಳುತ್ತಿದ್ದಾರೆ.
| ಶ್ರೀಲೀಲಾ