

ಬೆಂಗಳೂರು: ಕಳೆದ ಆಗಸ್ಟ್‌ನಲ್ಲಿ ನಿರ್ದೇಶಕ ತರುಣ್ ಸುಧೀರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಲ್ ಮೊಂಟೇರೊ ಮದುವೆ ಬಳಿಕವೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಅವರ ಕೈಯಲ್ಲಿ ಐದು ಸಿನಿಮಾಗಳಿವೆ. ಅದರಲ್ಲಿ ಮುಖ್ಯವಾಗಿ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿರುವ ‘ರಾಕ್ಷಸ’ ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿ, ತೆರೆಗೆ ಬರಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ‘ರಾಕ್ಷಸ’ ಪಾತ್ರ ಹಾಗೂ ಜರ್ನಿಯ ಕುರಿತು ಸೋನಲ್ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಮದುವೆಯ ಮಾತುಕತೆ ನಡೆಯುತ್ತಿರುವಾಗಲೇ ‘ರಾಕ್ಷಸ’ ಸಿನಿಮಾಕ್ಕೆ ಸಹಿ ಮಾಡಿದ್ದೆ. ಆ ಸಮಯದಲ್ಲಿ ಕೆಲ ಭಾಗದ ಚಿತ್ರೀಕರಣ ಮಾಡಲಾಗಿತ್ತು. ಶೇ.40ರಷ್ಟು ಶೂಟಿಂಗ್ ಮದುವೆಯ ಬಳಿಕ ನಡೆಯಿತು. ಇದೊಂದು ಹಾರರ್ ಎನ್ನುವುದಕ್ಕಿಂತ ಮಾಸ್ ಹಾಗೂ ಸೈನ್ಸ್ ಹಿನ್ನೆಲೆಯ ಚಿತ್ರ ಎನ್ನಬಹುದು. ನಿರ್ದೇಶಕ ಲೋಹಿತ್ ಬರವಣಿಗೆ ಚೆನ್ನಾಗಿ ಮೂಡಿಬಂದಿದೆ. ಮದುವೆಯಾದ 10 ಮಹಿಳೆಯರಲ್ಲಿ ಆರು ಜನಕ್ಕೆ ಕನೆಕ್ಟ್ ಆಗುವಂತಹ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿಕ್ಕದಾದರೂ ತುಂಬಾ ಪರಿಣಾಮ ಬೀರುವಂತಹದು. ಸದ್ಯ ನಾವು ಶೂಟಿಂಗ್ ಮಾಡಿರುವುದು ‘ರಾಕ್ಷಸ’ ಚಿತ್ರದ ಎರಡನೇ ಭಾಗ. ಇದೇ ಮೊದಲು ತೆರೆಗೆ ಬರಲಿದೆ. ಬಳಿಕ ಮೊದಲನೇ ಭಾಗ ಶೂಟ್ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.
ಆನ್ ದ ಸ್ಪಾಟ್ ಆ್ಯಕ್ಟಿಂಗ್: ಸೋನಲ್ ಪಾತ್ರಕ್ಕಾಗಿ ಸಿದ್ಧತೆ ಮಾಡುವುದಕ್ಕಿಂತ ಹೆಚ್ಚಾಗಿ ಆನ್ ದ ಸ್ಪಾಟ್‌ನಲ್ಲೇ ನಟಿಸಲು ಇಷ್ಟಪಡುತ್ತಾರಂತೆ. ಹಾಗೆಯೇ ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರಂತೆ. ಈ ಬಗ್ಗೆ, ‘ಹಲವು ಬಾರಿ ಹೆಚ್ಚು ಸಿದ್ಧತೆ ನಡೆಸಿ, ಹೋಗಿದ್ದಾಗ ಅಲ್ಲಿ ಫೇಲ್ ಆಗಿದ್ದಿದೆ. ಆದರೆ, ಆನ್ ದ ಸ್ಪಾಟ್ ಸ್ಕ್ರಿಪ್ಟ್ ನೋಡಿ ನಾನು ಚೆನ್ನಾಗಿಯೇ ನಟಿಸಿದ್ದೇನೆ. ಇದು ಯೋಗರಾಜ್ ಭಟ್ ಸರ್ ಅವರಿಂದ ಕಲಿತ ಪಾಠ. ಅವರ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರು ಸ್ಥಳದಲ್ಲಿಯೇ ಸ್ಕ್ರಿಪ್ಟ್ ನೀಡಿ, ನಟಿಸಲು ಹೇಳುತ್ತಾರೆ. ಹೀಗಾಗಿ, ನನಗೆ ಅದೇ ಅಭ್ಯಾಸವಾಗಿದೆ. ಇದರಿಂದ ಕಲಾವಿದರ ನೈಜತೆ ಹೊರಬರುತ್ತದೆ ಎನ್ನಬಹುದು. ಇನ್ನು, ‘ರಾಕ್ಷಸ’ದಲ್ಲಿ ಆ್ಯಕ್ಸಿಡೆಂಟ್ ದೃಶ್ಯದ ಶೂಟಿಂಗ್ ವೇಳೆ ತುಂಬಾ ಭಯವಾಗಿತ್ತು. ಆದರೆ, ಅದನ್ನು ಚೆನ್ನಾಗಿಯೇ ನಿರ್ವಹಿಸಿದೆ’ ಎಂದು ಹೇಳಿಕೊಳ್ಳುತ್ತಾರೆ ಸೋನಲ್.
ಕುಟುಂಬದಲ್ಲಿ ಸಿನಿಮಾ ವಾತಾವರಣ: ಮದುವೆಯ ಬಳಿಕ ಸೋನಲ್ ಮತ್ತಷ್ಟು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಅವರು ನಟಿಸಿರುವ ‘ಮಾದೇವ’, ‘ಕುಲದಲ್ಲಿ ಕೀಳ್ಯಾವುದೋ’, ‘ಬುದ್ಧಿವಂತ-2’, ‘ತಲ್ವಾರ್‌ಪೇಟೆ’ ಬಿಡುಗಡೆಗೆ ಸಿದ್ಧವಾಗಿವೆ. ಮತ್ತೊಂದು ಹೊಸ ಸಿನಿಮಾ ಸದ್ಯದಲ್ಲೇ ಅನೌನ್ಸ್ ಆಗಲಿದೆಯಂತೆ. ಸೋನಲ್, ‘ಮದುವೆ ನಂತರ ಮನೆಯಲ್ಲಿ ಸಿನಿಮಾ ವಾತಾವರಣ ನಿರ್ಮಾಣವಾಗಿದೆ. ಸಿನಿಮಾಗಳ ಬಗ್ಗೆಯೇ ಹೆಚ್ಚು ಮಾತನಾಡುವುದರಿಂದ ಚಿತ್ರದಲ್ಲಿ ಕಾಣಿಸಿಕೊಳ್ಳಲು ಉತ್ಸಾಹ ಮೂಡುತ್ತದೆ’ ಎನ್ನುತ್ತಾರೆ.