ಸಿಂಧು ಒಂದೊಳ್ಳೇ ಕೆಲಸ; ಕುಮಟದ ಕಡಲೆ ಬೀಚ್​ ಸ್ವಚ್ಛಗೊಳಿಸಿದ ನಟಿ

zxc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಸಿನಿಮಾ ತಾರೆಯರು ಪ್ರವಾಸಕ್ಕೆ ಹೋದಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಹಾಗೇ ಹೊಸ ಕಾಸ್ಟ್ಯೂಮ್​ನಲ್ಲಿ ರೀಲ್ಸ್​ ಮಾಡುವುದು ಕೂಡ ಕಾಮನ್​. ಅದರ ಜತೆ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಪ್ರದರ್ಶಿಸಿದರೆ ಉತ್ತಮ ಸಮಾಜ, ಪರಿಸರ ನಿರ್ಮಾಣ ಸಾಧ್ಯ ಎನ್ನುತ್ತಾರೆ "ಡ್ರಾಮಾ', "ಯಾರೇ ಕೂಗಾಡಲಿ', "ಲವ್​ ಇನ್​ ಮಂಡ್ಯ', "ಕೃಷ್ಣ ಟಾಕೀಸ್​' ಖ್ಯಾತಿಯ ನಟಿ ಸಿಂಧು ಲೋಕನಾಥ್​.

ಬರೀ ಹೇಳುವುದಷ್ಟೇ ಅಲ್ಲ, ಹಾಗೊಂದು ಒಳ್ಳೆ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿ ಕೂಡ ಆಗಿದ್ದಾರೆ. ಹೌದು, ಇತ್ತೀಚೆಗಷ್ಟೆ ಕುಮಟದ ಕಡಲೆ ಬೀಚ್​ಗೆ ಪ್ರವಾಸಕ್ಕೆಂದು ತೆರಳಿದ್ದ ಸಿಂಧು, ಅಲ್ಲಿ ಬಿದ್ದಿದ್ದ ಕಸವನ್ನು ನೋಡಿ ಶಾಕ್​ ಆಗಿದ್ದಾರೆ. ಹಾಗಂತ ಸುಮ್ಮನೆ ಕೂರದೇ ಎರಡು ದಿನಗಳ ಕಾಲ ಸುಮಾರು ಒಂದು ಕಿಲೋಮೀಟರ್​ನಷ್ಟು ದೂರ ಓಡಾಡಿ, ಬೀಚ್​ ಸ್ವಚ್ಛಗೊಳಿಸಿದ್ದಾರೆ.

"ನನಗೆ ಗೋಕರ್ಣ ಫೇವರಿಟ್​ ಜಾಗ. ಅಲ್ಲಿ ಬೀಚ್​ಗೆ ಸೂಯಾಸ್ತ ನೋಡುತ್ತಾ ಕೂರುವುದು ಬಹಳ ಇಷ್ಟ. ಇದೇ ಮೊದಲ ಬಾರಿ ಕಡಲೆ ಬೀಚ್​ಗೆ ತೆರಳಿದ್ದೆ. ತುಂಬ ಗಲೀಜಾಗಿರುವುದನ್ನು ನೋಡಿ ಬೇಸರವಾಯಿತು. ಸನ್​ಸೆಟ್​ ನೋಡುತ್ತಾ ಕ್ಲೀನ್​ ಮಾಡತೊಡಗಿದೆ. ನನ್ನ ಜತೆ ನನ್ನ ಸೋದರ ಸಂಬಂಧಿಯೂ ಜತೆಯಾದರು. ಎರಡು ದಿನ ಬೆಳಗ್ಗೆ, ಸಂಜೆ ತಲಾ ಎರಡು ತಾಸು ಬೀಚ್​ನ ಸುಮಾರು ಒಂದು ಕಿಲೋಮೀಟರ್​ ಓಡಾಡಿ ಇಬ್ಬರೂ ಬಿಯರ್​ ಬಾಟಲ್​, ಮದ್ಯದ ಪಾಕೆಟ್​, ನೀರಿನ ಪ್ಲ್ಯಾಸ್ಟಿಕ್​ ಬಾಟಲ್​, ಗಾಜಿನ ಬಾಟಲ್​ಗಳು, ಚಪ್ಪಲಿ ಸೇರಿ ಸಾಕಷ್ಟು ಕಸ ಸಂಗ್ರಹಿಸಿಟ್ಟೆವು ' ಎಂದು ಹೇಳಿಕೊಳ್ಳುತ್ತಾರೆ ಸಿಂಧು.

ಸಾಮಾಜಿಕ ಬದ್ಧತೆ ಇರಬೇಕು

"ಪ್ರವಾಸಿಗರಲ್ಲಿ ಸಾಮಾಜಿಕ ಬದ್ಧತೆ ಇದ್ದರೆ ಒಳಿತು' ಎನ್ನುವ ಸಿಂಧು, "ತಾವು ತರುವ ಊಟ, ತಿಂಡಿ, ನೀರು ಸೇವಿಸಿದ ಬಳಿಕ ಖಾಲಿ ಬಾಟಲ್​, ಪಾಕೆಟ್​ಗಳನ್ನು ಡಸ್ಟ್​ಬಿನ್​ಗೆ ಹಾಕಬೇಕು ಅಥವಾ ವಾಪಸ್​ ಕೊಂಡೊಯ್ಯಬೇಕು. ಬೀಚ್​ನಂತಹ ಪ್ರವಾಸಿತಾಣಗಳಾಗಿರಲಿ, ರಸ್ತೆಯೇ ಆಗಿರಲಿ ಎಲ್ಲೆಂದರಲ್ಲಿ ಕಸ ಹಾಕಬಾರದು. ಎಲ್ಲರಲ್ಲೂ ಈ ಜವಾಬ್ದಾರಿ ಮೂಡಬೇಕು. ವಿದೇಶಗಳಿಗೆ ಪ್ರವಾಸಕ್ಕೆ ಹೋಗುವವರು ಅಲ್ಲಿನ ಸ್ವಚ್ಛತೆಯನ್ನು ಹಾಡಿ ಹೊಗಳುತ್ತಾರೆ. ಅದಕ್ಕೆ ಅಲ್ಲಿನ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಮತ್ತು ಜನರ ಜವಾಬ್ದಾರಿ ಕೂಡ ಕಾರಣವಾಗಿರುತ್ತದೆ. ಅದೇ ರೀತಿ ಇಲ್ಲಿನ ಪ್ರವಾಸಿ ತಾಣಗಳಲ್ಲಿ ಡಸ್ಟ್​ಬಿನ್​ಗಳನ್ನು ಅಳವಡಿಸಬೇಕು. ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ಹಾಕಬೇಕು. ಹಾಗೇ ಸ್ವಚ್ಛತೆಯ ಬಗ್ಗೆ ಸೆಲೆಬ್ರಿಟಿಗಳು ಸಹ ಸಾಮಾಜಿಕ ಸಂದೇಶ ಸಾರುವ ಕೆಲಸ ಮಾಡಿದರೆ, ಹೆಚ್ಚು ಜನರಲ್ಲಿ ಅರಿವು ಮೂಡಿಸಬಹುದು' ಎನ್ನುತ್ತಾರೆ. ಅಂದಹಾಗೆ, ಸದ್ಯ ಚಿತ್ರವೊಂದರ ಮಾತುಕತೆ ನಡೆಸುತ್ತಿರುವ ಸಿಂಧು ಈ ತಿಂಗಳಂತ್ಯಕ್ಕೆ ಒಂದೊಳ್ಳೆ ಸುದ್ದಿ ಕೊಡುತ್ತಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net