

ಕರೊನಾ ಜಪದಿಂದ ಕ್ರಮೇಣ ಜನ ಹೊರಬರುತ್ತಿದ್ದಾರೆ. ಕ್ರಮೇಣ ಹಬ್ಬದ ಸೀಸನ್ಗೆ ಅಣಿಯಾಗುತ್ತಿದ್ದಾರೆ. ಮೊದಲ ಹಂತವಾಗಿ, ಗೌರಿ-ಗಣೇಶ ಹಬ್ಬದ ಸಂಭ್ರಮ ಇದೀಗ ಮನೆಮಾಡಿದ್ದು, ಇದಕ್ಕೆ ಕನ್ನಡ ಚಿತ್ರರಂಗ ಸಹ ಹೊರತಾಗಿಲ್ಲ. ಅದರಲ್ಲೂ ಸ್ಯಾಂಡಲ್ವುಡ್ ನಟಿಯರು ಗೌರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿಯ ಗೌರಿ ಹಬ್ಬ ಹೇಗಿರಲಿದೆ ಎಂಬುದನ್ನು ಶ್ವೇತಾ ಶ್ರೀವಾತ್ಸವ್ ವಿಶೇಷವಾಗಿ ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.
ಮಗಳೇ ಗೌರಿ... ಹಾಗಾಗಿ ಡಬಲ್ ಸಂಭ್ರಮ...
ಗಣಪತಿ ಹಬ್ಬ ತುಂಬ ವಿಶೇಷ. ನನ್ನ ಪತಿ ಅಮಿತ್ ಹುಟ್ಟಿದ್ದು ಗಣೇಶ ಹಬ್ಬದಂದು. ಏಕೆಂದರೆ, ಗೌರಿ ಹಬ್ಬದ ದಿನವೇ ಅಮ್ಮ ಹೆರಿಗೆಗೆಂದು ಆಸ್ಪತ್ರೆಗೆ ಹೋಗಿದ್ದರು. ಹಾಗಾಗಿ ನನಗೆ ಗೌರಿ ಹಬ್ಬ ವಿಶೇಷ. ಈಗ ಮನೆಯಲ್ಲಿ ಮುದ್ದಾದ ಗೌರಿ ಇರುವುದರಿಂದ ಸಂಭ್ರಮ ಕಳೆಗಟ್ಟಲಿದೆ. ಸಡಗರ ಸಂಭ್ರಮ ದುಪ್ಪಟ್ಟಾಗಲಿದೆ. ಆಚರಣೆ ವಿಚಾರಕ್ಕೆ ಬರುವುದಾದರೆ, ಬೆಳಗ್ಗೆ ಎಲ್ಲರೂ ಬೇಗನೆ ಎದ್ದು ಎಣ್ಣೆ ಸ್ನಾನ ಮಾಡುವುದು ರೂಢಿ. ಆಮೇಲೆ ಗೌರಿಯನ್ನು ತಂದು ಪೂಜಿಸುವುದು. ಪೂಜೆ ಅಂದಮೇಲೆ ಊಟವೂ ಅಷ್ಟೇ ರುಚಿಕಟ್ಟಾಗಿರಬೇಕು. ಕಡುಬು, ಕಜ್ಜಾಯ, ಲಾಡು, ರವೆ ಉಂಡೆ ಮಾಡುತ್ತೇವೆ. ಕಳೆದ ಎರಡು ವರ್ಷಗಳಿಂದ ಬಗೆಬಗೆಯ ಅಡುಗೆ ಮಾಡಿರಲಿಲ್ಲ. ಈ ವರ್ಷ ಚೂರು ಜಾಸ್ತಿಯೇ ಇರಲಿದೆ. ಸಂಬಂಧಿಕರು ವಿಡಿಯೋ ಕಾಲ್ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇವೆ. ಇನ್ನು, ಪೂಜೆಗೆ ಬೇಕಾದ ಬಾಳೆ, ಮಾವು, ಹೂವು ಹಣ್ಣು ಎಲ್ಲವನ್ನೂ ಮನೆ ಬಳಿಯೇ ಬೆಳೆದಿದ್ದೇವೆ. ಅವುಗಳನ್ನೇ ಬಳಸಿಕೊಂಡು ತೋರಣ ಮಾಡುತ್ತೇವೆ. ಕಚ್ಚೆ ಸೀರೆಯಲ್ಲಿ ಪೂಜೆ ಮಾಡುವುದು ಸಂಪ್ರದಾಯ. ಈ ಸಲ ಮಗಳ ಕಡೆಯಿಂದ ಶ್ಲೋಕ ಓದಿಸುತ್ತೇನೆ.
| ಶ್ವೇತಾ ಶ್ರೀವಾತ್ಸವ್