‘ಎಕ್ಕ’ ರಾಣಿ, ರಾಯಲ್ ‘ಕ್ವೀನ್’: ನಟಿ ಸಂಜನಾ ಆನಂದ್​ ಗೆ ಸಂಕ್ರಾಂತಿ ಡಬಲ್ ಖುಷಿ

sanjana 2
Published on

ಬೆಂಗಳೂರು: ‘ಸಲಗ’ ಖ್ಯಾತಿಯ ನಟಿ ಸಂಜನಾ ಆನಂದ್ ಸಂಕ್ರಾಂತಿ ಹಬ್ಬದ ಡಬಲ್ ಖುಷಿಯಲ್ಲಿದ್ದಾರೆ. ಸದ್ಯ ಅವರು ವಿರಾಟ್‌ಗೆ ನಾಯಕಿಯಾಗಿ ನಟಿಸಿರುವ, ದಿನಕರ್ ತೂಗುದೀಪ ನಿರ್ದೇಶನದ ‘ರಾಯಲ್’ ಇದೇ ತಿಂಗಳ 24ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಈ ಮಧ್ಯೆಯೇ, ಸಂಜನಾ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಹೌದು ರೋಹಿತ್ ಪದಕಿ ನಿರ್ದೇಶನದ, ಯುವರಾಜಕುಮಾರ್ ನಾಯಕನಾಗಿರುವ ‘ಎಕ್ಕ’ ಚಿತ್ರಕ್ಕೆ ಸಂಜನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಚಿತ್ರತಂಡ ಈ ಬಗ್ಗೆ ಹೊಸ ಪೋಸ್ಟರ್ ಮೂಲಕ ಅಧಿಕೃತವಾಗಿ ಘೋಷಿಸಿದೆ. ‘ತೊದಲು ಪ್ರೀತಿಯ ಮೊದಲ ಪರಿಚಯ’ ಎಂಬ ಅಡಿಬಹರದಲ್ಲಿ ಯುವರಾಜಕುಮಾರ್ ಹಾಗೂ ಸಂಜನಾ ಆನಂದ್ ಇರುವ ಪೋಸ್ಟರ್ ರಿಲೀಸ್ ಆಗಿದೆ. ಬೆಂಗಳೂರು ಭೂಗತ ಲೋಕದ ಎಳೆಯನ್ನು ಆಧರಿಸಿದ ‘ಎಕ್ಕ’ ಒಂದು ಕಲ್ಟ್ ಸಿನಿಮಾ. ಅಶ್ವಿನಿ ಪುನೀತ್‌ರಾಜಕುಮಾರ್, ಜಯಣ್ಣ-ಭೋಗೇಂದ್ರ ಹಾಗೂ ಕಾರ್ತಿಕ್ ಗೌಡ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಳೆದ ನ.28ರಂದು ಸಿನಿಮಾ ಸೆಟ್ಟೇರಿದ್ದು, ಬೆಂಗಳೂರಿನ ಹಲವೆಡೆ ಭರದಿಂದ ಶೂಟಿಂಗ್ ಸಾಗಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಈಗಾಗಲೇ ನಟಿ ಸಂಪದಾ ಆಯ್ಕೆಯಾಗಿದ್ದರು. ಇದೀಗ ಮತ್ತೊಬ್ಬ ನಾಯಕಿಯಾಗಿ ಸಂಜನಾ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜತೆಗೆ ಪುನೀತ್ ರುದ್ರನಾಗ್, ಅತುಲ್ ಕುಲಕರ್ಣಿ, ಶ್ರುತಿ ಕೃಷ್ಣ ಮತ್ತು ರಾಹುಲ್ ದೇವ್ ಶೆಟ್ಟಿ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ, ದೀಪು ಎಸ್. ಸಂಕಲನ ಇರಲಿದೆ. ಅಂದುಕೊಂಡಂತಾದರೆ, ಇದೇ ಜೂ. 6ಕ್ಕೆ ‘ಎಕ್ಕ’ ತೆರೆ ಮೇಲೆ ಬರಲಿದೆ.

ರಾಯಲ್ ‘ಕ್ವೀನ್’: ಸಂಜನಾ ಆನಂದ್ ನಟಿಸಿರುವ ‘ರಾಯಲ್’ ಸಿನಿಮಾ ಇದೇ ತಿಂಗಳ 24ರಂದು ರಿಲೀಸ್ ಆಗಲಿದೆ. ಈಗಾಗಲೇ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ವಿರಾಟ್‌ಗೆ ಜೋಡಿಯಾಗಿರುವ ಸಂಜನಾ, ಈ ಚಿತ್ರದಲ್ಲಿ ಐಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮೂರು ಸಾಂಗ್‌ಗಳು ರಿಲೀಸ್ ಆಗಿದ್ದು, ವೈರಲ್ ಆಗಿವೆ. ಇಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. 2018ರಲ್ಲಿ ತೆರೆಕಂಡಿದ್ದ ‘ಲೈಫ್​ ಜತೆ ಒಂದು ಸೆಲ್ಫಿ’ ಬಳಿಕ ದಿನಕರ್ ತೂಗುದೀಪ್ ‘ರಾಯಲ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net