ಮತ್ತೆ ಬಂದ ಸಂಗೀತಾ; ಅಬ ಜಬ ದಬ ಚಿತ್ರದಲ್ಲೊಂದು ಸ್ಟೈಲಿಶ್ ಪಾತ್ರ

Sangeetha
Published on

ಬೆಂಗಳೂರು: ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಚಿರಂಜೀವಿ ಸರ್ಜಾ ಅಭಿನಯದ ‘ಆದ್ಯ’ ಚಿತ್ರವೇ ಕೊನೆ. ಆ ನಂತರ ಸಂಗೀತಾ ಭಟ್ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈ ಮಧ್ಯೆ, ಮೀಟೂ ಚಳವಳಿಗೆ ಅವರು ಧ್ವನಿ ಸೇರಿಸಿದ್ದು, ಚಿತ್ರರಂಗದಿಂದ ಕೆಲ ಕಾಲ ದೂರ ಇದ್ದಿದ್ದು, ಆ ನಂತರ ಅವರು ರೀ-ಎಂಟ್ರಿ ಕೊಡುತ್ತಾರೆ ಎಂದು ಸುದ್ದಿಯಾಗಿದ್ದು ... ಇವೆಲ್ಲವೂ ನಡೆದಿತ್ತು. ಇದೀಗ ಸಂಗೀತಾ, ‘ಅಬ ಜಬ ದಬ’ ಚಿತ್ರದ ಮೂಲಕ ವಾಪಸ್ಸು ಬಂದಿದ್ದಾರೆ.

ಪೃಥ್ವಿ ಅಂಬರ್ ಮತ್ತು ಅಂಕಿತಾ ಅಮರ್ ಅಭಿನಯದ ‘ಅಬ ಜಬ ದಬ’ ಚಿತ್ರವು ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. 10 ದಿನಗಳ ಚಿತ್ರೀಕರಣ ಮುಗಿದರೆ ಕುಂಬಳಕಾಯಿ ಒಡೆದಂತೆ. ಈ ಮಧ್ಯೆ, ಚಿತ್ರತಂಡಕ್ಕೆ ಸಂಗೀತಾ ಭಟ್ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಕೆ.ಎಚ್. ಕಲಾಸೌಧದಲ್ಲಿ ನಡೆದ ಚಿತ್ರೀಕರಣದಲ್ಲಿ ಅವರು ಭಾಗವಹಿಸಿದ್ದೂ ಆಗಿದೆ.

ಚಿತ್ರ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡುವ ಸಂಗೀತಾ, ‘ಈ ಚಿತ್ರದಲ್ಲಿ ನನ್ನದು ಸುನಂದಾ ಕಾಂಬ್ರೇಕರ್ ಎಂಬ ಪಾತ್ರ. ಒಂದು ತಿಂಗಳ ಹಿಂದೆ ನಿರ್ದೇಶಕ ಮಯೂರ ರಾಘವೇಂದ್ರ ಭೇಟಿ ಮಾಡಿ ಕಥೆ ಹೇಳಿದರು. ಅವರು ಹಳೆಯ ಪರಿಚಯ. ‘ಎರಡನೇ ಸಲ’ ಚಿತ್ರದ ಸಮಯದಿಂದ ನಾನು ಅವರನ್ನು ಬಲ್ಲೆ. ಅಷ್ಟು ಪರಿಚಯ ಇದ್ದು, ಒಂದೇ ಒಂದು ಪುಟ ಇರುವ ಪಾತ್ರಕ್ಕೆ ನನ್ನನ್ನು ಕರೆದಿದ್ದೀರಾ ಎಂದು ಹೇಳಿದೆ. ಒಂದೇ ಒಂದು ಪುಟವಿದ್ದರೂ, ಬಹಳ ಮುಖ್ಯ ಪಾತ್ರ. ಒಂದೊಳ್ಳೆಯ ಸಿನಿಮಾ ಆಗುತ್ತಿದೆ ಎಂದರೆ, ಅದರ ಭಾಗವಾಗುವುದು ನಮ್ಮ ಅದೃಷ್ಟ. ಅದೇ ರೀತಿ, ಈ ಚಿತ್ರದ ಭಾಗವಾಗಿರುವುದು ನನ್ನ ಅದೃಷ್ಟ. ಪಾತ್ರದ ಬಗ್ಗೆ ಹೆಚ್ಚು ಹೇಳೋದು ಕಷ್ಟ. ಇದೊಂದು ಸ್ಟೈಲಿಶ್ ಪಾತ್ರ. ಹೆಚ್ಚು ಹೇಳಿದರೆ ಕಥೆ ಬಿಟ್ಟುಕೊಟ್ಟ ಹಾಗಾಗುತ್ತದೆ’ ಎನ್ನುತ್ತಾರೆ ಸಂಗೀತಾ.

‘ಅಬ ಜಬ ದಬ’ ಚಿತ್ರದಲ್ಲಿ ಪೃಥ್ವಿ, ಅಂಕಿತಾ ಮತ್ತು ಸಂಗೀತಾ ಜತೆಗೆ ಅಚ್ಯುತ್ ಕುಮಾರ್, ಸುಧಾರಾಣಿ, ಊರ್ವಶಿ, ಬಾಬು ಹಿರಣ್ಣಯ್ಯ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net