ಸಾಮಾಜಿಕ ಸಂಯುಕ್ತಾ: ಕರುನಾಡ ಹಬ್ಬಕ್ಕೆ ಹೊರನಾಡು ಬೆಡಗಿಯ ಮಾತು

Samyuktha
Published on

ಬೆಂಗಳೂರು: ನಾಡಿನೆಲ್ಲೆಡೆ ಇಂದು 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕರುನಾಡ ಹಬ್ಬವನ್ನು ರಾಜ್ಯಾದ್ಯಂತ ಜನ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಕನ್ನಡದ ಉತ್ಸವ ಈ ವರ್ಷ ಕೊಂಚ ಹೆಚ್ಚೇ. ಅದಕ್ಕೆ ಗಡಿಯ ಮಿತಿ ಮೀರಿ, ಭಾಷೆಯ ಇತಿ ದಾಟಿ ಕೆಂಪು, ಹಳದಿ ಬಾವುಟ ಹಾರಿಸುತ್ತಿರುವ ಕನ್ನಡ ಚಿತ್ರಗಳೇ ಸಾಕ್ಷಿ.

ಇದೇ ಸಡಗರದಲ್ಲಿ ಈ ಬಾರಿಯ ಕನ್ನಡ ಹಬ್ಬದಂದು ನಟಿ ಸಂಯುಕ್ತಾ ಹೊರನಾಡು ಒಂದೊಳ್ಳೆ ನಿರ್ಧಾರಕ್ಕೆ ಬಂದಿದ್ದಾರೆ. ಅವರೇ ಹೇಳುವಂತೆ, ‘ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅಂತ ಬಂದಾಗ ಇಂಗ್ಲೀಷ್ ಮತ್ತು ಹಿಂದಿ ಹಾಡುಗಳೇ ಹೆಚ್ಚು. ಹೀಗಾಗಿ ಕನ್ನಡ ಹಾಡುಗಳು ಅದರಲ್ಲೂ ಹಳೆಯ ಕನ್ನಡ ಹಾಡುಗಳು, ಜಾನಪದ ಗೀತೆಗಳನ್ನು ಹೆಚ್ಚಾಗಿ ರೀಲ್ಸ್ ಮಾಡಬೇಕು. ಆ ಮೂಲಕ ಇಂದಿನ ತಂತ್ರಜ್ಞಾನದ ಮೂಲಕವೇ ಈಗಿನ ಪೀಳಿಗೆಗೆ ಕನ್ನಡದ ಬಗ್ಗೆ ಅರಿವು ಮೂಡಿಸಬೇಕು ಎಂದುಕೊಂಡಿದ್ದೇನೆ. ಕುವೆಂಪು ಅವರ ‘ಮುಚ್ಚು ಮರೆಯಿಲ್ಲದೇ...’ ಗೀತೆ ಎಷ್ಟು ಅರ್ಥಗರ್ಭಿತವಾಗಿದೆ ಅಲ್ಲವೇ? ನನ್ನ ಪ್ರಕಾರ ಅದರಲ್ಲಿರುವ ಅರ್ಥ ಯಾವ ಭಾಷೆಯ ಯಾವ ಹಾಡಿನಲ್ಲೂ ಇಲ್ಲ. ಆ ಗೀತೆಯನ್ನು ಈ ವಾರದಲ್ಲಿ ಕಲಿತುಕೊಳ್ಳಬೇಕು. ಪುಸ್ತಕಗಳನ್ನು ಓದಲೇಬೇಕು ಅಂತಿಲ್ಲ, ಹಳೆಯ ಕನ್ನಡ ಹಾಡುಗಳನ್ನು ಕೇಳಿದರೆ ಸಾಕು, ಅಷ್ಟೊಂದು ಅರ್ಥಪೂರ್ಣವಾಗಿವೆ’ ಎನ್ನುತ್ತಾರೆ.

ಇನ್ನು ಈಗಿನ ಕನ್ನಡ ಚಿತ್ರರಂಗದ ಸುವರ್ಣ ಘಳಿಗೆಯ ಬಗ್ಗೆ ಮಾತನಾಡುವ ಸಂಯುಕ್ತಾ, ‘ಕನ್ನಡದಲ್ಲಿ ಉತ್ತಮ ಚಿತ್ರಗಳು ಬಂದರೂ, ಸರಿಯಾದ ಪ್ರಚಾರ ಸಿಗದೇ, ಅವು ಬೇರೆ ಚಿತ್ರರಂಗಗಳನ್ನು ತಲುಪುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಕನ್ನಡ ಚಿತ್ರರಂಗ ಒಂದು ಮನೆಯಂತಾಗಿ, ಒಗ್ಗಟ್ಟು ಮೂಡಿದೆ. ಒಬ್ಬರ ಚಿತ್ರವನ್ನು ಮತ್ತೊಬ್ಬರು ಬೆಂಬಲಿಸುತ್ತಿದ್ದಾರೆ. ಈಗಂತೂ ‘ಗಂಧದ ಗುಡಿ’, ‘ಕಾಂತಾರ’ ಚಿತ್ರಗಳು ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಸುದ್ದಿ ಮಾಡುತ್ತಿವೆ. ಎಲ್ಲರಿಗೂ ಈ ರೀತಿಯ ಚಿತ್ರಗಳನ್ನು ಮಾಡಲು ಸಾಧ್ಯವಿಲ್ಲ. ಅಪು್ಪ ಸರ್ ಸಿನಿಮಾ ಅಂತು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಮೂಡಿಬಂದಿದೆ, ಪರಿಸರದ ಜತೆ ಹೊಂದಿಕೊಂಡು ಬದುಕಬೇಕು ಎಂಬ ಸಾರ್ವತ್ರಿಕ ಸಂದೇಶವಿದೆ. ಇಂತಹ ಚಿತ್ರಗಳು ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿವೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net