

ಬೆಂಗಳೂರು: ಹಾಲು ತುಪ್ಪ’, ‘ಅಮೃತ ಘಳಿಗೆ’, ‘ವಿಷ್ಣು ಸರ್ಕಲ್’ ನಟಿ, ಸಕಲೇಶಪುರ ಮೂಲದ ಸಂಹಿತಾ ವಿನ್ಯಾಗೆ ಈ ಬಾರಿಯ ದಸರಾ ಹಬ್ಬದಲ್ಲೇ ಬಂಪರ್ ಉಡುಗೊರೆ ಸಿಕ್ಕಿದೆ. ನವರಾತ್ರಿಯ ಎರಡನೇ ದಿನವೇ ಅವರಿಗೆ ತಮಿಳು ಸಿನಿಮಾ ಆರ್ ಬಂದಿದ್ದು, ಸಹಿ ಕೂಡ ಮಾಡಿದ್ದಾರಂತೆ. ಇನ್ನೇನು ಆ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದ್ದು, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಕಾರಣ ಸಂಹಿತಾ ಈ ಬಾರಿ ಕೆಲಸದಲ್ಲಿಯೇ ದೇವಿಯನ್ನು ಕಾಣುತ್ತಿದ್ದಾರಂತೆ. ಹಬ್ಬದ ಕೊನೆಯ ಎರಡು ದಿನ ಮನೆಗೆ ಹೋಗಿ ಅದ್ದೂರಿಯಾಗಿ ಆಚರಿಸಲಿದ್ದಾರಂತೆ. ‘ಪ್ರತಿ ವರ್ಷ ದಸರಾ ಸಮಯದಲ್ಲಿ ಮನೆಯಲ್ಲಿದ್ದು, ಸಂಭ್ರಮದಿಂದ ಕುಟುಂಬದವರ ಜತೆ ಆಚರಿಸುತ್ತಿದ್ದೆ. ಈ ಬಾರಿ ದೇವಿಯ ಕೃಪೆ ಇರಬೇಕು ತುಂಬಾ ಬಿಜಿಯಾಗಿದ್ದು, ಕೆಲಸದಲ್ಲಿಯೇ ದೇವಿಯನ್ನು ಕಾಣಬೇಕಿದೆ. ಬಿಡುವಿಲ್ಲದೆ ಶೂಟಿಂಗ್ ಇರುವ ಕಾರಣ ಈ ಬಾರಿ ಒಂಬತ್ತು ದಿನವೂ ಮನೆಯಲ್ಲಿರಲು ಆಗುತ್ತಿಲ್ಲ. ಪ್ರತಿ ದಿನ ಅಮ್ಮನೇ ಮನೆಯಲ್ಲಿ ದೇವಿ ಆರಾಧನೆ ಮಾಡುತ್ತಿದ್ದಾರೆ. ಆಯುಧ ಪೂಜೆ ದಿನ ಮನೆಗೆ ಹೋಗುವೆ. ಹೀಗಾಗಿ ಆಯುಧ ಪೂಜೆ, ವಿಜಯದಶಮಿಯನ್ನು ಅದ್ದೂರಿಯಾಗಿ ಆಚರಿಸುವೆ. ಚಿಕ್ಕಂದಿನಿಂದಲೂ ನನಗೆ ಮೈಸೂರು ದಸರಾದ ನಂಟಿದೆ. ನನ್ನ ಅಜ್ಜಿಯ ಊರು ಮೈಸೂರು. ಶಾಲಾ ದಿನಗಳಲ್ಲಿ ದಸರಾ ರಜೆ ಸಿಕ್ಕರೆ ನಾವು ಅಜ್ಜಿ ಮನೆಗೆ ಹೋಗುತ್ತಿದ್ದೆವು. ಹಾಗಾಗಿ, ಆ ದಿನಗಳಲ್ಲಿ ತುಂಬಾ ಹತ್ತಿರದಿಂದ ಮೈಸೂರು ದಸರಾ ಕಣ್ತುಂಬಿಕೊಂಡಿದ್ದೇನೆ. ಅಂಬಾರಿ ಮೆರವಣಿಗೆ ಇಂದಿಗೂ ನನ್ನನ್ನು ಆಕರ್ಷಿಸುತ್ತದೆ. ಈ ಬಾರಿ ಹೋಗಲು ಆಗಿಲ್ಲವೆಂದರೂ, ನನಗೆ ಬಿಡುವು ಸಿಕ್ಕಾಗೆಲ್ಲ ಮೈಸೂರು ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿ ದರ್ಶನ ಪಡೆದು ಬರುತ್ತೇನೆ. ಮೈಸೂರು ಅಂದರೆ ನನಗೆ ಅಷ್ಟಿಷ್ಟ. ದೇವಿಯು ನಮ್ಮೆಲ್ಲರ ಕಷ್ಟಗಳು, ಅಡೆತಡೆಗಳೆಲ್ಲ ಹೋಗಲಾಡಿಸಲಿ ಎಂಬುದೇ ನನ್ನ ಪ್ರಾರ್ಥನೆ’ ಎಂದು ಹಬ್ಬದ ಬಗ್ಗೆ ಹಂಚಿಕೊಳ್ಳುತ್ತಾರೆ.
ದಸರಾ ಹಬ್ಬದ ಸಿಹಿ, ಹೊಸ ಸಿನಿಮಾಗೆ ಸಹಿ
ಈ ಬಾರಿ ಹಬ್ಬದ ದಿನವೇ ತಮಿಳು ಚಿತ್ರಕ್ಕೆ ಸಹಿ ಮಾಡಿರುವ ಸಂಹಿತಾ, ‘ಹಬ್ಬದ ಎರಡನೇ ದಿನವಾದ ಮಂಗಳವಾರ ಹೊಸ ತಮಿಳು ಚಿತ್ರಕ್ಕೆ ಸಹಿ ಮಾಡಿದ್ದೇನೆ. ಇನ್ನು ಹಬ್ಬದ ಸಮಯದಲ್ಲಿಯೇ ನನಗೆ ಅವಕಾಶಗಳು ಹೆಚ್ಚುತ್ತಿವೆ. ಕನ್ನಡದ ಐದು ಸಿನಿಮಾಗಳು ರಿಲೀಸ್ ಹಾದಿಯಲ್ಲಿವೆ. ತಮಿಳಿನ ನಾಲ್ಕು ಸಿನಿಮಾಗಳ ಶೂಟಿಂಗ್ ಮಾಡುತ್ತಿದ್ದೇನೆ. ಹೀಗಾಗಿ ನವರಾತ್ರಿ ನನ್ನಲ್ಲಿ ಹೊಸ ಚೈತನ್ಯ ತಂದಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.