ಮೊದಲ ಐಟಂ ಸಾಂಗ್​ ಸಂಭ್ರಮದಲ್ಲಿ ನಟಿ ಸಂಭ್ರಮಶ್ರೀ ; 'ಪ್ರೇಮಕಾವ್ಯ' ಚಿತ್ರದಲ್ಲಿ ನಟಿಯ ಸ್ಪೆಷಲ್​ ಹಾಡು

Premakavya (4)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

‘ಮಾಯೆ’ ಚಿತ್ರದ ಬಳಿಕ ನಿರ್ದೇಶಕ ಎನ್.ಎಸ್. ಶ್ರೀಧರ್ ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ‘ಪ್ರೇಮಕಾವ್ಯ’. ಸದ್ಯ ಈ ಸಿನಿಮಾದ ಶೂಟಿಂಗ್ ಹೆಸರಘಟ್ಟದಲ್ಲಿ ಭರದಿಂದ ಸಾಗಿದೆ. ನಿರ್ದೇಶಕ ಶ್ರೀಧರ್, ‘ನಾನು ನಿರ್ದೇಶಿಸಿ, ನಿರ್ಮಿಸಿದ ‘ಮಾಯೆ’ ಚಿತ್ರದ ಐದು ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಅದೇ ಅವರ ಮೊದಲ ಸಿನಿಮಾ ಕೂಡ ಹೌದು. ಆದರೆ, ಚಿತ್ರದಲ್ಲಿ ನಾಲ್ಕು ಹಾಡುಗಳನ್ನಷ್ಟೇ ಬಳಸಿಕೊಂಡಿದ್ದೆವು. ಕಾರಣಾಂತರಗಳಿಂದ ಒಂದು ಐಟಂ ಸಾಂಗ್ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಅದೇ ಹಾಡನ್ನು ‘ಪ್ರೇಮಕಾವ್ಯ’ ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಲವ್‌ಸ್ಟೋರಿಯಾಗಿದ್ದು, ಸಂಭ್ರಮಶ್ರೀ ಈ ಸ್ಪೆಷಲ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ‘ಇದುವರೆಗೂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದೆ. ಇದೀಗ ಮೊದಲ ಬಾರಿಗೆ ಐಟಂ ಸಾಂಗ್‌ಗೆ ಡಾನ್ಸ್ ಮಾಡಿರುವುದು ಖುಷಿ ನೀಡಿತು’ ಎಂದು ಹೇಳಿಕೊಂಡರು. ಈಗಾಗಲೇ ಬೆಂಗಳೂರು, ಹೈದರಾಬಾದ್, ಕುಶಾಲನಗರ ಮತ್ತು ಮಡಿಕೇರಿಯ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ.

ಎಲ್ಲವೂ ಅಂದುಕೊಂಡಂತಾದರೆ ಚಿತ್ರವನ್ನು ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಇದೇ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು. ಸೌರಭ್ ಮತ್ತು ದಿವ್ಯಾ ಸುರೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಹರೀಶ್ ರೈ, ಎಂ.ಡಿ.ಕೌಶಿಕ್ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net