ಸಮಂತಾ ಲೈಫಲ್ಲೊಂದು ದಿನ ; ತಮ್ಮ ದೈನಂದಿನ ಬದುಕಿನ ಝಲಕ್​ ನೀಡಿದ ಟಾಲಿವುಡ್​ ನಟಿ

SDV (2)
Published on

ಕಳೆದ ವರ್ಷ ಬ್ಯಾಕ್​ ಟು ಬ್ಯಾಕ್​ "ಶಾಕುಂತಲಂ' ಮತ್ತು "ಖುಷಿ' ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಸಮಂತಾ ಸದ್ಯ "ಸಿಟಡೆಲ್​: ಹನಿ ಬನ್ನಿ' ವೆಬ್​ಸರಣಿಯಲ್ಲಿ ಬಿಜಿಯಾಗಿದ್ದಾರೆ. ಅದರ ನಡುವೆಯೂ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಮಂತಾಗೆ ಹಲವಾರು ಅಭಿಮಾನಿಗಳು "ನಿಮ್ಮ ದೈನಂದಿನ ಬದುಕು ಹೇಗಿರುತ್ತೆ?' ಎಂದು ಕೇಳುತ್ತಿದ್ದರು. ಅವರಿಗೆ ಒಂದು ವಿಡಿಯೋ ಝಲಕ್​ ಮೂಲಕ ಉತ್ತರಿಸಿರುವ ಸಮಂತಾ, ತಮ್ಮ ರೂಟೀನ್​ ಹೇಗಿರುತ್ತದೆ ಎಂಬುದರ ಬಗ್ಗೆ ಉತ್ತರಿಸಿದ್ದಾರೆ.

ಅದರಂತೆ ಸಮಂತಾ ಪ್ರತಿದಿ ಬೆಳಗ್ಗೆ 6 ಗಂಟೆಗೆ ಇದ್ದು, 6.30ಕ್ಕೆ ಸೂರ್ಯನ ಬೆಳಕಿನಲ್ಲಿ ನಿಲ್ಲುತ್ತಾರಂತೆ. ಬಳಿಕ ಆಯಿಲ್​ ಪುಲ್ಲಿಂಗ್​ ಮತ್ತು ಚೀನಾದ ಸಾಂಪ್ರದಾಯಿಕ ಚಿಕಿತ್ಸಾ ವಿಧಾನವಾದ ಗುವ ಶಾ (ಸುಕ್ಕು ಬಾರದಂತೆ ತ್ವಚೆಯ ಸೌಂದರ್ಯ ಕಾಪಾಡಲು ನುಣುಪಾದ ಕಲ್ಲಿನಿಂದ ಮೃದುವಾಗಿ ಮುಖ ಉಜ್ಜುವುದು) ಮಾಡುತ್ತಾರೆ. ನಂತರ 7 ಗಂಟೆಗೆ ಜಿಮ್​ನಲ್ಲಿ ವರ್ಕೌಟ್​ ಮಾಡುವುದು, ಬಳಿಕ ಮನೆಗೆ ವಾಪಸಾಗಿ ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ ಕೈಮುಗಿದು, ತಿಂಡಿ ಸೇವಿಸಿ, ರೆಡಿಯಾಗಿ 9 ಗಂಟೆಗೆ ಸರಿಯಾಗಿ ಸೆಟ್​ಗೆ ತೆರಳುತ್ತಾರಂತೆ.

ಬಳಿಕ ಮೇಕಪ್​ಗೂ ಮುನ್ನ ಐಸ್​ ಕ್ಯೂಬ್​ ಇರುವ ನೀರಿನಲ್ಲಿ ಮುಖ ತೊಳೆಯುವುದು. ಸಂಜೆ 5.30ರವರೆಗೆ ಶೂಟಿಂಗ್​ನಲ್ಲಿ ಭಾಗಿಯಾಗಿ ನಂತರ 6 ಗಂಟೆಗೆ ರೆಡ್​ ಲೈಟ್​ ಥೆರಪಿ ತೆಗೆದುಕೊಳ್ಳುವುದು, 7 ಗಂಟೆಗೆ ಸ್ನೇಹಿತರ ಜತೆ ಪಿಕಲ್​ ಬಾಲ್​ ಆಡುವುದು, ನಂತರ ಮನೆಗೆ ಬಂದು ಊಟ ಮಾಡಿ, ರಾತ್ರಿ 9.30ಕ್ಕೆ ಅರ್ಧ ಗಂಟೆ ಧ್ಯಾನ ಮಾಡಿ 10 ಗಂಟೆಗೆ ನಿದ್ರೆಗೆ ಜಾರುವುದು ತಮ್ಮ ರೂಟೀನ್​ ಎಂದು ವಿಡಿಯೋ ಮೂಲಕ ಸಮಂತಾ ಹೇಳಿಕೊಂಡಿದ್ದಾರೆ. -ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net