

ನಟಿ ರೂಪಿಕಾ ಅವರಿಗೆ ಫೆಬ್ರವರಿ ತುಂಬ ವಿಶೇಷ. ಇವರ ‘ಮಂಜರಿ’, ‘ಕಾಲ್ಗೆಜ್ಜೆ’ ಸಿನಿಮಾ ಬಿಡುಗಡೆ ಆಗಿದ್ದು ಫೆಬ್ರವರಿಯಲ್ಲೇ. ಇದೀಗ ನಾಯಕಿ ಆಗಿ ಕಾಣಿಸಿಕೊಂಡಿರುವ ‘ಥರ್ಡ್ ಕ್ಲಾಸ್’ ಸಿನಿಮಾ ತೆರೆ ಕಾಣುತ್ತಿರುವುದು ಕೂಡ ಈ ತಿಂಗಳಲ್ಲಿ. ಶುಕ್ರವಾರ (ಫೆ.7) ಬಿಡುಗಡೆ ಆಗಲಿರುವ ಈ ಚಿತ್ರ, ಅದರಲ್ಲಿನ ತಮ್ಮ ಪಾತ್ರದ ಬಗ್ಗೆ ರೂಪಿಕಾ ಮಾಹಿತಿ ಹಂಚಿಕೊಂಡಿದ್ದು ಹೀಗೆ...
‘ಥರ್ಡ್ ಕ್ಲಾಸ್’ - ‘ಇದು ಆಡುಭಾಷೆಯಲ್ಲಿ ಬೈಗುಳದ ಪದ. ನಟನಿಗೆ ಬಯ್ಯುವಾಗ ಇದನ್ನೇ ಹೆಚ್ಚು ಬಳಸುವ ಕಾರಣ ಚಿತ್ರಕ್ಕೆ ಈ ಹೆಸರಿದೆ. ಹಾಗಂತ ಇದು ‘ಥರ್ಡ್ ಕ್ಲಾಸ್’ ಅಲ್ಲ, ಫಸ್ಟ್ಕ್ಲಾಸ್ ಸಿನಿಮಾ..’ ಎನ್ನುತ್ತಾರೆ ನಟಿ ರೂಪಿಕಾ. ಇವರು ನಿಜಜೀವನದಂತೆ ಚಿತ್ರದಲ್ಲಿಯೂ ಸಂಗೀತಪ್ರಿಯೆ. ‘ಸಿನಿಮಾದಲ್ಲಿ ಹೋಂ ಮಿನಿಸ್ಟರ್ ಅವರ ಏಕಮಾತ್ರ ಪುತ್ರಿ, ಸಂಗೀತ ಎಂದರೆ ಉಸಿರು. ತಂದೆ-ಮಗಳ ಸಂಬಂಧ, ಪ್ರೀತಿ ದುಡ್ಡು ಎಂದಾಗ ಆಕೆ ಯಾವುದಕ್ಕೆ ಮಹತ್ವ ಕೊಡುತ್ತಾಳೆ ಎಂಬುದು ನನ್ನ ಪಾತ್ರ’ ಎಂದು ಅವರು ಹೇಳುತ್ತಾರೆ. ‘ಚಿತ್ರಕ್ಕೆ ನಮ್ ಜಗದೀಶ್ ಮಲ್ಟಿಟಾಸ್ಕ್ ಮಾಡಿದ್ದಾರೆ. ಕಥೆ-ಚಿತ್ರಕಥೆ ರಚಿಸಿ ಸಿನಿಮಾ ನಿರ್ಮಾಣ ಮಾಡುವ ಜತೆಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ. ‘ನಾಯಕ ಅನಾಥ, ಗ್ಯಾರೇಜ್ನಲ್ಲಿ ಕೆಲಸ ಮಾಡುವಾಗ ಶ್ರೀಮಂತ ಹುಡುಗಿಯ ಪ್ರೇಮಬಲೆಗೆ ಸಿಲುಕಿ, ಬಳಿಕ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ ಎಂಬುದು ಚಿತ್ರಕಥೆ. ‘ಥರ್ಡ್ಕ್ಲಾಸ್’ ಸೆಂಟಿಮೆಂಟ್ ಇರುವ ಕಮರ್ಷಿಯಲ್ ಸಿನಿಮಾ’ ಎನ್ನುತ್ತಾರೆ ರೂಪಿಕಾ.
ಚಿತ್ರತಂಡದಿಂದ ಸಮಾಜಮುಖಿ ಕಾರ್ಯ: ‘ಥರ್ಡ್ಕ್ಲಾಸ್’ ಸಿನಿಮಾ ಒಂದಲ್ಲ ಒಂದು ವಿಷಯದಿಂದ ಸದಾ ಸುದ್ದಿಯಲ್ಲಿದೆ. ಅಂಧ-ಅನಾಥ ಮಕ್ಕಳಿಂದ ಆಡಿಯೋ ಬಿಡುಗಡೆ ಮಾಡಿಸಿದ್ದ ಚಿತ್ರತಂಡ, ಅವರಿಗೆ 2 ಲಕ್ಷ ರೂ. ಹಾಗೂ ಸುಮಾರು 50 ಸಾವಿರ ಆಟೋ, ಕ್ಯಾಬ್ ಚಾಲಕರಿಗೆ 1 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದೆ. ನೆರೆಪ್ರವಾಹದ ವೇಳೆ ‘ಥರ್ಡ್ ಕ್ಲಾಸ್ ನಡೆ, ಗ್ರಾಮದ ಕಡೆ’ ಎಂಬ ಅಭಿಯಾನದ ಮೂಲಕ ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನ ‘ಕರ್ಲಕೊಪ್ಪ’ ಗ್ರಾಮ ದತ್ತು ಪಡೆದು ಅಭಿವೃದ್ಧಿ ಮಾಡಿದೆ. ‘ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಶುಕ್ರವಾರದ ಮೊದಲ ಪ್ರದರ್ಶನ ಉಚಿತ’ ಎಂದು ಹೇಳುವ ರೂಪಿಕಾ, ‘ಅಲ್ಲಿರುವ ಅಂಧ ಮಕ್ಕಳಿಗೆ ಪ್ರೇಕ್ಷಕರು ಕೈಲಾದಷ್ಟು ಧನಸಹಾಯ ಮಾಡಬೇಕು’ ಎನ್ನುತ್ತಾರೆ.
ಪರಭಾಷಾ ಚಿತ್ರಗಳಲ್ಲಿ ರೂಪಿಕಾ ಬಿಜಿ
ರೂಪಿಕಾ ಸದ್ಯ ತೆಲುಗಿನ ‘2+1’, ‘ದಾಡಿ’ ಸಿನಿಮಾಗಳಲ್ಲಿ ಬಿಜಿ. ಅಲ್ಲದೆ, ಕನ್ನಡದ ‘ಡೈಮಂಡ್ ಕ್ರಾಸ್’ ಚಿತ್ರದಲ್ಲೂ ಭಾಗಿಯಾಗಿದ್ದಾರೆ. ಈ ಮಧ್ಯೆ ಸಾಕಷ್ಟು ಚಿತ್ರಗಳ ಅವಕಾಶ ಬರುತ್ತಿದ್ದು, ಉತ್ತಮ ಕಥೆ ಇರುವ ಚಿತ್ರಕ್ಕೆ ಮೊದಲ ಆದ್ಯತೆಯಂತೆ . ಇವರು ಉತ್ತಮ ನೃತ್ಯಪಟು ಕೂಡ. ‘ಗೆಜ್ಜೆ ಶಾಲೆ’ ಎಂಬ ನಾಟ್ಯಶಾಲೆ ಮೂಲಕ ಮಕ್ಕಳಿಗೆ ನೃತ್ಯ ಕಲಿಸುವ ಕೆಲಸ ಮಾಡುತ್ತಿದ್ದಾರೆ.
| ಶಿವರಾಯ ಪೂಜಾರಿ ಬೆಂಗಳೂರು