

ರಶ್ಮಿಕಾ ಮಂದಣ್ಣ ಅದ್ಯಾವ ಮಟ್ಟಿಗೆ ಬಿಜಿಯಾಗಿದ್ದಾರೆಂದರೆ, ಅವರಿಗೆ ಕೊಡಗಿನಲ್ಲಿನ ತಮ್ಮ ಮನೆಗೂ ಹೋಗಲು ಸಮಯ ಸಿಗುತ್ತಿಲ್ಲವಂತೆ. ಕಳೆದ ಎಂಟು ತಿಂಗಳಿಂದ ಮುಂಬೈ, ಹೈದರಾಬಾದ್ ನಡುವೆ ಓಡಾಡಿಕೊಂಡಿರುವ ಅವರು, ಕರೊನಾ ಹಾವಳಿ, ಲಾಕ್ಡೌನ್, ಕೆಲಸ ... ಹೀಗೆ ಹಲವು ಕಾರಣಗಳಿಂದ ಅಪ್ಪ-ಅಮ್ಮನನ್ನು ಭೇಟಿಯಾಗಲು ಆಗುತ್ತಿಲ್ಲವಂತೆ. ಪಾಲಕರ ಮದುವೆ ವಾರ್ಷಿಕೋತ್ಸವಕ್ಕೂ ಬರುವುದಕ್ಕೆ ರಶ್ಮಿಕಾಗೆ ಸಾಧ್ಯವಾಗದೆ, ಕೊನೆಗೆ ಸೋಷಿಯಲ್ ಮೀಡಿಯಾ ಮೂಲಕವೇ ಅವರು ಅಪ್ಪ-ಅಮ್ಮನಿಗೆ ಶುಭಾಶಯ ತಿಳಿಸಿದ್ದಾರೆ. ‘ಕಳೆದ ವರ್ಷದ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಾನು ನಿಮ್ಮನ್ನು ನೋಡಿದ್ದು. ನಿಮ್ಮನ್ನು ನೋಡದೇ ಇರುವುದು ಕಷ್ಟವೆನಿಸುತ್ತಿದೆ. ಪ್ರತಿ ಸಲವೂ ನಾನು ಮನೆಗೆ ಬರಲು ಕಾತರದಲ್ಲಿರುತ್ತೇನೆ. ಆದರೆ, ಆಗ ಲಾಕ್ಡೌನ್ ಇರುತ್ತದೆ ಅಥವಾ ಅಷ್ಟರಲ್ಲಿ ಶೂಟಿಂಗ್ ಶುರುವಾಗಿರುತ್ತದೆ. ನಿಮ್ಮನ್ನೆಲ್ಲ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕುಟುಂಬದ ಜತೆಗಿನ ಒಂದೊಳ್ಳೆಯ ಫೋಟೋ ಸಹ ನನ್ನ ಬಳಿ ಇಲ್ಲ. ಹ್ಯಾಪಿ ಆನಿವರ್ಸರಿ’ ಎಂದು ಬರೆದುಕೊಂಡಿದ್ದಾರೆ.
ನಿತಿನ್ ಜತೆಗೆ ಮತ್ತೊಂದು ಸಿನಿಮಾ: ‘ಭೀಷ್ಮ’ ಸಿನಿಮಾ ಮೂಲಕ ಮೊದಲ ಬಾರಿ ಒಂದಾಗಿದ್ದ ರಶ್ಮಿಕಾ ಮಂದಣ್ಣ ಮತ್ತು ನಿತಿನ್, ಇದೀಗ ಮತ್ತೊಮ್ಮೆ ಜತೆಯಾಗಲಿದ್ದಾರೆ. ಇಂಥದ್ದೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು, ವಕ್ಕಂತಮ್ ವಂಸಿ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.