

ರಷಮಿ ದೇಸಾಯಿ, ಹಿಂದಿ ಕಿರುತೆರೆಯಲ್ಲಿ ಅತಿ ದೊಡ್ಡ ಹೆಸರು. ಎರಡು ದಶಕಗಳ ಕರಿಯರ್ನಲ್ಲಿ 20ಕ್ಕೂ ಹೆಚ್ಚು ರಿಯಾಲಿಟಿ ಶೋಗಳು, ಮ್ಯೂಸಿಕ್ ಆಲ್ಬಂಗಳು, "ಉತ್ತರಣ್' ಸೇರಿ ಹಲವು ಧಾರಾವಾಹಿಗಳು, ವೆಬ್ಸರಣಿಗಳು, 30ಕ್ಕೂ ಅಧಿಕ ಹಿಂದಿ, ಭೋಜಪುರಿ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ಅವರಿಗೆ ಸಲ್ಲುತ್ತದೆ.
ಇಂತಹ ರಷಮಿ 2011ರಲ್ಲಿ ಕಿರುತೆರೆ ನಟ ನಂದೀಶ್ ಸಂಧು ಜತೆ ಮದುವೆಯಾದರು. ಆದರೆ, ನಾಲ್ಕು ವರ್ಷಗಳಲ್ಲೇ ವಿಚ್ಛೇದನ ಪಡೆದರು. ಈ ಸಂದರ್ಭದಲ್ಲಿ ಕಿರುತೆರೆ ಸ್ಟಾರ್ ಆಗಿದ್ದರೂ ರೇಷಮಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಂತೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ ರಷಮಿ ದೇಸಾಯಿ.
"ಆಗಷ್ಟೇ ನಾನು ಮನೆ ಖರೀದಿಸಿದ್ದೆ. ಅದರ ಲೋನ್ ಸೇರಿ 3.5 ಕೋಟಿ ರೂ. ಸಾಲ ನನ್ನ ಮೇಲಿತ್ತು. ಅದೇ ಸಮಯದಲ್ಲಿ ಸಡನ್ನಾಗಿ ನಾನು ನಟಿಸುತ್ತಿದ್ದ ಶೋ ಸ್ಥಗಿತಗೊಳಿಸಿಬಿಟ್ಟರು. ಹಣವೂ ಇಲ್ಲ, ಅವಕಾಶವೂ ಇಲ್ಲದ ಪರಿಸ್ಥಿತಿ. ಆಗ ನಾಲ್ಕು ದಿನಗಳ ಕಾಲ ನಾನು ನನ್ನ ಆಡಿ 6 ಕಾರಿನಲ್ಲಿ ವಾಸವಿದ್ದೆ. ಆಗ 20 ರೂಪಾಯಿಗೆ ರಿಕ್ಷಾವಾಲಾಗಳಿಗೆ ಊಟ ಸಿಗುತ್ತಿತ್ತು. ಅದೇ ಊಟ ಮಾಡಿಕೊಂಡು ನಾಲ್ಕು ದಿನ ಕಾರಿನಲ್ಲಿ ಮಲಗುತ್ತಿದ್ದೆ. ನನ್ನ ಕುಟುಂಬದವರು, ಸಂಬಂಧಿಕರು ಸಹ ನನ್ನನ್ನು ದೂರ ಮಾಡಿಬಿಟ್ಟಿದ್ದರು. ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಯೂ ಬಂದಿತ್ತು' ಎಂದು ಕಷ್ಟದ ದಿನಗಳನ್ನು ನೆನದು ಭಾವುಕರಾಗಿದ್ದಾರೆ ರಷಮಿ.