

ಬೆಂಗಳೂರು: ಬಿಡುಗಡೆಗೆ ಸಜ್ಜಾಗುತ್ತಿರುವ 'ಹೊಂದಿಸಿ ಬರೆಯಿರಿ' ಚಿತ್ರತಂಡಕ್ಕೆ ದಿವ್ಯ ಸ್ಪಂದನ ಲಭಿಸಿದೆ. ಅರ್ಥಾತ್, ಈ ಸಿನಿಮಾದ ಗೀತೆಯನ್ನು ಬಿಡುಗಡೆ ಮಾಡುವಂತೆ ಕೋರಿಕೊಂಡಿರುವ ಚಿತ್ರತಂಡಕ್ಕೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಸ್ಪಂದಿಸಿದ್ದಾರೆ. ಹೀಗಾಗಿ ಚಿತ್ರದ 'ಓ.. ಕವನ' ಸಾಂಗ್ ಶೀಘ್ರದಲ್ಲೇ ರಮ್ಯಾರಿಂದ ಬಿಡುಗಡೆ ಆಗಲಿದೆ.
ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಈ ಚಿತ್ರತಂಡಕ್ಕೆ ಇದೀಗ ನಟಿ ರಮ್ಯಾ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದ 'ಓ ಕವನ' ಎಂಬ ವಿಡಿಯೋ ಸಾಂಗ್ ಸೆ. 28ರಂದು ನಟಿ ರಮ್ಯಾ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ. ನ. 18ಕ್ಕೆ ಈ ಚಿತ್ರ ಬಿಡುಗಡೆ ಆಗಲಿದೆ.
ಬದುಕಿನಲ್ಲಿ ಏನೇ ಆದರೂ, ಅದಕ್ಕೆ ನಾವೇ ಹೊಣೆ. ಆಗಿರುವ ವಿಷಯಗಳನ್ನು ಹೊಂದಿಸಿ ಬರೆದುಕೊಂಡು ಜೀವನ ಸಾಗಿಸಬೇಕು ಎನ್ನುವ ಸಂದೇಶವನ್ನು ಇಟ್ಟುಕೊಂಡು ಸಿನಿಮಾವನ್ನು ರೂಪಿಸಲಾಗಿದ್ದು, ಏಳು ಯುವಕ-ಯುವತಿಯರ ಒಂದೊಂದು ಕಥೆಯೂ ಚಿತ್ರದಲ್ಲಿದೆ.
ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀಮಹಾದೇವ್, ಭಾವನಾ ರಾವ್, ನವೀನ್ ಶಂಕರ್, ಅರ್ಚನಾ ಜೋಯಿಸ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸುನೀಲ್ ಪುರಾಣಿಕ್, ಪ್ರವೀಣ್ ಡಿ ರಾವ್, ಧರ್ಮೇಂದ್ರ ಅರಸ್, ನಂಜುಂಡೇ ಗೌಡ, ಸುಧಾ ನರಸಿಂಹರಾಜು ಹಿರಿಯ ಕಲಾವಿದರ ದಂಡು ಚಿತ್ರದಲ್ಲಿದೆ.
ಜೋ ಕೋಸ್ಟ ಸಂಗೀತ, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.ಗುಳ್ಟು ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, "ಸಂಡೇ ಸಿನಿಮಾಸ್" ಬ್ಯಾನರ್ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಅವರ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.