ಅಂದು ಸ್ಟೂಡೆಂಟ್, ಇಂದು ಲೆಕ್ಚರರ್! ಹಾಸ್ಟೆಲ್ ಹುಡುಗರಿಗೆ ರಮ್ಯಾ ಮೇಡಂ ಪಾಠ

hostel hudugaru ramya
Published on

| ಹರ್ಷವರ್ಧನ್ ಬ್ಯಾಡನೂರು

ಭಿನ್ನ-ವಿಭಿನ್ನ ಪ್ರೋಮೋಗಳು, ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಪುನೀತ್ ರಾಜಕುಮಾರ್, ರಮ್ಯಾ, ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ದಿಗಂತ್, ಪವನ್ ಕುಮಾರ್ ಸೇರಿ ಹಲವಾರು ತಾರೆಯರು ಚಿತ್ರಕ್ಕೆ ತಮ್ಮದೇ ರೀತಿಯಲ್ಲಿ ಸಾಥ್ ನೀಡಿದ್ದಾರೆ. ಈ ಹಿಂದೆ ರಮ್ಯಾ ಕೇವಲ ಪ್ರಚಾರದ ಪ್ರೋಮೋದಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಟ್ರೇಲರ್ ರಿಲೀಸ್ ಬಳಿಕ ಅವರು ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದು ರಿವೀಲ್ ಆಗಿದೆ.

ಏಳು ವರ್ಷಗಳ ಬಳಿಕ ರಮ್ಯಾ
2016ರಲ್ಲಿ ರಿಲೀಸ್ ಆದ ‘ನಾಗರಹಾವು’ ಚಿತ್ರದ ಬಳಿಕ ರಮ್ಯಾ ರಾಜಕೀಯದಲ್ಲಿ ಬಿಜಿಯಾದ ಕಾರಣ ಚಿತ್ರರಂಗದಿಂದ ದೂರವಾಗಿದ್ದರು. ಕೆಲವು ತಿಂಗಳ ಹಿಂದೆ ನಿರ್ಮಾಪಕಿಯಾಗಿ ವಾಪಸ್ಸಾದ ಅವರು, ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ನಟನೆಯಿಂದ ಹಿಂದೆ ಸರಿದಿದ್ದರು. ಅವರನ್ನು ಒಪ್ಪಿಸಿ, ಏಳು ವರ್ಷಗಳ ನಂತರ ಮತ್ತೆ ಕ್ಯಾಮರಾ ಮುಂದೆ ಕರೆತಂದು ನಿಲ್ಲಿಸಿದೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’.

ಲೆಕ್ಚರರ್ ಥರ ಆದರೆ ಲೆಕ್ಚರರ್ ಅಲ್ಲ!
2003ರಲ್ಲಿ ‘ಅಭಿ’ ಚಿತ್ರದಲ್ಲಿ ವಿದ್ಯಾರ್ಥಿನಿ ಪಾತ್ರದಲ್ಲಿ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ್ದರು ರಮ್ಯಾ. ಇದೀಗ 20 ವರ್ಷಗಳ ನಂತರ ಮತ್ತೆ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಆದರೆ, ಇಲ್ಲವರು ಸ್ಟೂಡೆಂಟ್ ಅಲ್ಲ. ಲೆಕ್ಚರರ್ ಇರಬಹುದಾ ಅಂದರೆ, ನಿರ್ಮಾಪಕ ವರುಣ್, ‘ಲೆಕ್ಚರರ್ ಥರ ಆದರೆ, ಲೆಕ್ಚರರ್ ಅಲ್ಲ. ್ಯಾಂಟಸಿಯಲ್ಲಿ ಬರುತ್ತಾರೆ. ನಮ್ಮ ಸಿನಿಮಾದ ಪ್ರೋಮೋಸ್ ನೋಡಿ ಕಾನ್ಸೆಪ್ಟ್ ಚೆನ್ನಾಗಿದೆ ಎಂದು ಖುಷಿಯಿಂದ ಒಪ್ಪಿಕೊಂಡು ನಟಿಸಿದರು. ಒಂದು ದಿನ ಪ್ರೋಮೋ, ಎರಡು ದಿನ ಸಿನಿಮಾ ಚಿತ್ರೀಕರಣದಲ್ಲಿ ನಮ್ಮ ಜತೆಗಿದ್ದರು’ ಎಂದು ಮಾಹಿತಿ ನೀಡುತ್ತಾರೆ.

ವಿಶೇಷ, ವಿಭಿನ್ನ ಪಾತ್ರದಲ್ಲಿ ನಟನೆ
‘ಹಾಸ್ಟೆಲ್ ಹುಡುಗರು…’ ನಿರ್ದೇಶಕ ನಿತಿನ್ ಕೃಷ್ಣಮೂರ್ತಿಗೆ ಚೊಚ್ಚಲ ನಿರ್ದೇಶನದಲ್ಲೇ ಮೋಹಕ ತಾರೆಗೆ ಆ್ಯಕ್ಷನ್-ಕಟ್ ಹೇಳಿದ ಸಂಭ್ರಮ. ‘ರಮ್ಯಾ ನಟಿಸಿದರೆ ಚಂದ ಅಂತ ಅನ್ನಿಸಿತ್ತು. ಹೀಗಾಗಿ ಮೊದಲು ಮೇಲ್ ಮಾಡಿದೆವು. ಬಳಿಕ ಚಿತ್ರದ ಸಾರಾಂಶ ಕಳುಹಿಸಿದೆವು. ಬಳಿಕ ಭೇಟಿಯಾಗಿ ಪಾತ್ರದ ಬಗ್ಗೆ ತಿಳಿಸಿದೆವು. ವಿಶೇಷವಾದರೂ, ವಿಭಿನ್ನ ಪಾತ್ರದಲ್ಲಿ ರಮ್ಯಾ ನಟಿಸಿದ್ದಾರೆ. ಹೊಸ ತಂಡದ ಜತೆ ನಗುತ್ತಾ ಶೂಟಿಂಗ್‌ನಲ್ಲಿ ಪಾಲ್ಗೊಂಡರು. ಅವರ ಜತೆ ಕೆಲಸ ಮಾಡಿದ ಅನುಭವ ತುಂಬ ಚೆನ್ನಾಗಿತ್ತು’ ಎಂದು ಸಂತಸ ವ್ಯಕ್ತಪಡಿಸುತ್ತಾರೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಇದೇ ಶುಕ್ರವಾರ (ಜು. 21) ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net