

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಬಾಲಿವುಡ್ ಅಥವಾ ಪಂಜಾಬಿ ಚಿತ್ರಗಳಂತೆ ಕನ್ನಡದಲ್ಲಿ ಮ್ಯೂಸಿಕ್ ಆಲ್ಬಂಗಳು ಹೆಚ್ಚಾಗಿ ಸದ್ದು ಮಾಡದಿದ್ದರೂ, ಆಗೊಮ್ಮೆ ಈಗೊಮ್ಮೆ ಆಲ್ಬಂ ಹಾಡುಗಳು ಬರುತ್ತಿರುತ್ತವೆ. ಅದೇ ಸಾಲಿಗೆ ಸೇರುವ ಆಲ್ಬಂ ಸಾಂಗ್ "ಓ ಏ ಲಡ್ಕಿ'. ಅಧೀರ ಸಂತು ಈ ಕನ್ನಡ ಆಲ್ಬಂಅನ್ನು ಸ್ಟೆ$ಲಿಶ್ಆಗಿ ಬಾಲಿವುಡ್ ಶೈಲಿಯಲ್ಲಿ ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೆ ನಟಿ ರಾಗಿಣಿ ದ್ವಿವೇದಿ ಈ ಆಲ್ಬಂ ಸಾಂಗ್ ರಿಲೀಸ್ ಮಾಡಿ, "ಹಾಡು ತುಂಬ ಚೆನ್ನಾಗಿ ಮೂಡಿಬಂದಿದೆ. ಉತ್ತಮ ಲೊಕೇಶನ್ಗಳಲ್ಲಿ ಚಿತ್ರೀಕರಿಸಿದ್ದಾರೆ. ಈ ಹಾಡನ್ನು ನೋಡಿ ನನಗೂ ಅಧೀರ ಸಂತು ಜತೆ ಕೆಲಸ ಮಾಡುವ ಆಸಕ್ತಿ ಮೂಡಿದೆ' ಎಂದರು.
ಅಧೀರ ಸಂತು, "ನಾನು ಚಿತ್ರರಂಗಕ್ಕೆ ಹೊಸಬನಲ್ಲ. ಉಪೇಂದ್ರ ಅವರ 50ನೇ ಚಿತ್ರ ನಾನೇ ಮಾಡಬೇಕಿತ್ತು. ಅವರು ಕಥೆ ಒಪ್ಪಿ ಡೇಟ್ಸ್ ಕೂಡ ಕೊಟ್ಟಿದ್ದರು. ಆದರೆ, ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ನಟಿ ರಾಗಿಣಿ ಅವರನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಈ ಹಾಡನ್ನು ಮಾಡಿದ್ದೇನೆ' ಎಂದು ಹೇಳಿಕೊಂಡರು. ಹಾಡಿನಲ್ಲಿ ನಾಯಕ ಸಮೀರ್ ನಗರದ್ ಡೆಲಿವರಿ ಬಾಯ್ ಪಾತ್ರದಲ್ಲಿ ಮತ್ತು ನಾಯಕಿ ಅಮೃತಾ ಎನ್ಆರ್ಐ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಒಬ್ಬ ಡೆಲಿವರಿ ಬಾಯ್, ಎನ್ಆರ್ಐ ಹುಡುಗಿಯ ನಡುವಿನ ಲವ್ಸ್ಟೋರಿಯನ್ನು "ಏ ಓ ಲಡ್ಕಿ' ಹಾಡಿನಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ಸಂತು. ಖುದ್ದಿ ಸಂತು ಅವರೇ ಈ ಹಾಡಿಗೆ ಸಾಹಿತ್ಯ ರಚಿಸಿ, ಹಾಡಿದ್ದಾರೆ. ಹಾಡಿಗೆ ಎಂ.ಎಸ್. ತ್ಯಾಗರಾಜ್ ಸಂಗೀತ, ಹಾಲೇಶ್ ಸಂಕಲನವಿದೆ.