ರಾಗಿಣಿ 2.0!; ಜನ್ಮದಿನದ ಸಂಭ್ರಮ

Ragini
Published on

ರಾಗಿಣಿ ದ್ವಿವೇದಿ ಅವರಿಗೆ ಮಂಗಳವಾರ (ಮೇ 24) 32ನೇ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ, ‘ಸಾರಿ’ ಚಿತ್ರತಂಡವು ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಮ್ಮ ಚಿತ್ರದ ನಾಯಕಿಯ ಹುಟ್ಟುಹಬ್ಬವನ್ನು ಆಚರಿಸಿತು. ಬಳಿಕ ಮಾತನಾಡಿದ ರಾಗಿಣಿ, ‘ಚಿತ್ರರಂಗದಲ್ಲಿ 11 ವರ್ಷ ಪೂರೈಸಿದ್ದೇನೆ. ಹಲವು ರೀತಿಯ ಸಿನಿಮಾಗಳು, ಪಾತ್ರಗಳು, ಹಾಡುಗಳನ್ನು ಮಾಡಿದ್ದೇನೆ. ಒಂದೇ ದಾರಿಯಲ್ಲಿ ಹೋಗಬೇಕು ಎಂಬುದು ನನಗೆ ಇಷ್ಟವಿಲ್ಲ. ಹೀಗಾಗಿಯೇ ‘ಸಾರಿ’ ಒಪ್ಪಿಕೊಂಡೆ. ಇದು ಒಂದು ಜಾನರ್​ಗೆ ಸೇರದೇ ಆಕ್ಷನ್, ಸಸ್ಪೆನ್ಸ್, ಕ್ರೌರ್ಯ, ಎಮೋಷನ್ಸ್, ಅಲೌಕಿಕ ಅಂಶಗಳು ಇರುವ ಬಹುಜಾನರ್​ಗಳ ಸಿನಿಮಾ’ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ರಾಗಿಣಿ ಪ್ರಕಾರ ಈ ಕಥೆಯನ್ನು ಐದಾರು ವರ್ಷಗಳ ಹಿಂದೆಯೇ ಮಾಡಿದ್ದರೆ, ಕ್ರಾಂತಿಯಾಗುತ್ತಿತ್ತಂತೆ. ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುವ ರಾಗಿಣಿ, ‘ಇದು ಸಾಮಾನ್ಯ ಸಿನಿಮಾ ಅಲ್ಲ. ಸೂಪರ್ ಹೀರೋ ಸಿನಿಮಾ. ಆದರೆ, ಇಲ್ಲಿ ಪ್ರೀಕ್ವಲ್ ಕಥೆ ಹೇಳಲಿದ್ದೇವೆ. ನಂತರ ಎರಡನೇ ಭಾಗದಲ್ಲಿ ಸೂಪರ್ ಹೀರೋ ಸ್ಟೋರಿ ಹೇಳಲಿದ್ದೇವೆ’ ಎನ್ನುತ್ತಾರೆ. ಬ್ರಹ್ಮ ನಿರ್ದೇಶಿಸಲಿರುವ ಈ ಚಿತ್ರವನ್ನು ಕೆನಡಾದಲ್ಲಿ ಪೋಸ್ಟ್ ಪ್ರೊಡಕ್ಷನ್ ಸ್ಟುಡಿಯೋ ನಡೆಸುತ್ತಿರುವ ನವೀನ್ ಕುಮಾರ್ ನಿರ್ವಿುಸುತ್ತಿದ್ದಾರೆ.

ಕೆಜಿಎಫ್’ನಿಂದ ಎಲ್ಲರ ಕಣ್ಣು ನಮ್ಮ ಮೇಲಿದೆ!: ಇನ್ನು ‘ಕೆಜಿಎಫ್’ ಚಿತ್ರದ ಅದ್ಭುತ ಯಶಸ್ಸಿನ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡ ರಾಗಿಣಿ, ‘‘ಕೆಜಿಎಫ್’ ಚಿತ್ರವು ಗಡಿಗಳನ್ನು ಒಡೆದುರುಳಿಸಿದೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಪ್ರತಿಭೆಗಳು ಮೊದಲಿಂದಲೂ ಇದ್ದಾರೆ. ಉತ್ತಮ ಸಿನಿಮಾಗಳು ಕೂಡ ಬರುತ್ತಿವೆ. ಆದರೆ, ನಮ್ಮ ಚಿತ್ರರಂಗಕ್ಕೆ ಸಿಗಬೇಕಾದ ಪ್ರಾಮುಖ್ಯತೆ ಮಾತ್ರ ಸರಿಯಾಗಿ ಸಿಗುತ್ತಿಲ್ಲ. ‘ಕೆಜಿಎಫ್’ ನಂತರ ಕನ್ನಡ ಚಿತ್ರರಂಗದವರು ಏನು ಮಾಡುತ್ತಾರೆ ಎಂದು ಎಲ್ಲರೂ ಎದುರು ನೋಡುತ್ತಿದ್ದಾರೆ. ಇದು ಹಲವು ವರ್ಷಗಳ ಹಿಂದೆಯೇ ಆಗಬೇಕಿತ್ತು’ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಮಂಗಳಮುಖಿಯರು, ವೃದ್ಧಾಶ್ರಮಗಳಿಗೆ ರಾಗಿಣಿ ಸಹಾಯ: ರಾಗಿಣಿ ಅವರೀಗ ಮೊದಲಿನಂತಿಲ್ಲ. ಅವರೇ ಹೇಳುವಂತೆ ಈಗ ಇರುವುದು ‘ರಾಗಿಣಿ 2.0’. ಚಿತ್ರರಂಗದಲ್ಲಿ ದಶಕ ಪೂರೈಸಿರುವ ರಾಗಿಣಿ ಕೈಯಲ್ಲಿ ಏಳು ಚಿತ್ರಗಳಿವೆ. ಮೂರು ತಮಿಳು, ಎರಡು ಕನ್ನಡ, ಒಂದು ತೆಲುಗು ಹಾಗೂ ಒಂದು ಪ್ಯಾನ್ ಇಂಡಿಯಾ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಜನ್​ಎಕ್ಸ್ ಟ್ರಸ್ಟ್ ಮೂಲಕ ಮಂಗಳಮುಖಿಯರಿಗೆ ವೈದ್ಯಕೀಯ ಸೌಲಭ್ಯ, ಓಟರ್ ಐಡಿ, ಲಸಿಕೆ ಸೇರಿದಂತೆ ಹಲವು ಸೌಲಭ್ಯ ಕೊಡಿಸುವ ಬಗ್ಗೆ ಅವರು ಯೋಚಿಸಿದ್ದಾರೆ. ಹಾಗೆಯೇ, ಚಿತ್ರರಂಗದ ಹಿರಿಯರಿಗೆಂದೇ ವೃದ್ಧಾಶ್ರಮ ಕಟ್ಟಿಸುತಿದ್ದಾರಂತೆ ರಾಗಿಣಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net