Priyanka Upendra Interview; ತಮ್ಮ ಸಿನಿಮಾಗಳ ಜತೆ ಜತೆಗೆ ಪತಿ ಮತ್ತು ಪುತ್ರರ ಚಿತ್ರಗಳ ಬಗ್ಗೆ ಬ್ರೇಕಿಂಗ್​ ಕೊಟ್ಟ ನಟಿ

asascsa
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿರುವ "ಕಮರೊ2' ಇದೇ ಆ. 22ರಂದು ತೆರೆಗೆ ಬರಲಿದೆ. ಅದರ ಬೆನ್ನಲ್ಲೇ ಅವರ ನಟನೆಯ 50ನೇ ಸಿನಿಮಾ "ಡಿಟೆಕ್ಟಿವ್​ ತೀಕ್ಷ್ಣ', "ವೈರಸ್​', "ಕ್ಯಾಪ್ಚರ್​' ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿವೆ. ಕನ್ನಡದಲ್ಲಿ ಬಿಜಿಯಾಗಿರುವ ನಡುವೆಯೇ ಪ್ರಿಯಾಂಕಾ "ಸೆಪ್ಟೆಂಬರ್​ 21' ಎಂಬ ಹಿಂದಿ ಚಿತ್ರದ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. 2013ರಲ್ಲಿ ರಿಲೀಸ್​ ಆದ "ಎನಿಮಿ' ಬಳಿಕ 12 ವರ್ಷಗಳ ಗ್ಯಾಪ್​ ನಂತರ ಮತ್ತೆ ಬಾಲಿವುಡ್​ಗೆ ವಾಪಸ್ಸಾಗಿದ್ದಾರೆ. ""ಸೆ.21' ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್​-ಪ್ರೊಡಕ್ಷನ್​ ಹಂತದಲ್ಲಿದೆ. ನನ್ನ ಪಾತ್ರದ ಡಬ್ಬಿಂಗ್​ ನಡೆಯಬೇಕಿದೆ. ತುಂಬ ದಿನಗಳ ಬಳಿಕ ಹಿಂದಿ ಸಿನಿಮಾ ಮಾಡಿದ್ದು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದೇನೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಪ್ರಿಯಾಂಕಾ ಉಪೇಂದ್ರ.

ಆಯುಷ್​ ಡೆಬ್ಯೂಗೆ ದಿನಗಣನೆ

ಪುತ್ರ ಆಯುಷ್​ ಉಪೇಂದ್ರ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಗೊತ್ತಿದೆ. ಈಗಾಗಲೇ ಅವರ ಫೋಟೋಶೂಟ್​ ಮುಗಿದಿದ್ದು, ಶ್ರಾವಣದಲ್ಲೇ ಸಿನಿಮಾ ಪೂಜೆ ನೆರವೇರಿಸುವ ಆಲೋಚನೆ ಚಿತ್ರತಂಡದ್ದು. ಈ ಬಗ್ಗೆ ಪ್ರಿಯಾಂಕಾ, "ನಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ. ಆದರೆ, ಚಿತ್ರದ ಪ್ರತಿ ಹಂತದಲ್ಲೂ ಇರುತ್ತೇನೆ. ಹಾಗಂತ ಅವರ ಹಸ್ತಕ್ಷೇಪ ಮಾಡುವುದಿಲ್ಲ. ಪಾಲಕರಾಗಿ ನಾನು ಮತ್ತು ಉಪೇಂದ್ರ ಎಷ್ಟು ಸಪೋರ್ಟ್​ ಮಾಡಬೇಕೋ ಅಷ್ಟು ಮಾಡುವೆವು. ಸದ್ಯ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಆಯುಷ್​ ಮತ್ತು ಐಶ್ವರ್ಯಾ ಇಬ್ಬರೂ ಸಿನಿಮಾ ಕುರಿತ ಶಿಕ್ಷಣ ಪಡೆಯುತ್ತಿದ್ದಾರೆ. ಇಬ್ಬರಿಗೂ ಕಥೆ ಬರೆಯುವುದೆಂದರೆ ಇಷ್ಟ. ಇದೀಗ ಆಯುಷ್​ ಚಿತ್ರದ ಪ್ರಾರಂಭದಿಂದಲೂ ಇಬ್ಬರೂ ತೊಡಗಿಸಿಕೊಂಡಿದ್ದಾರೆ' ಎಂದು ಮಾಹಿತಿ ನೀಡುತ್ತಾರೆ.

ಅವನೂ ಕಷ್ಟಪಡಬೇಕು

"ಉಪೇಂದ್ರ, ನಾನು, ಉಪ್ಪಿ ಅಣ್ಣನ ಮಗ ನಿರಂಜನ್​ ಸುಧೀಂದ್ರ, ನನ್ನ ತಮ್ಮ ವಿನಾಯಕ್​, ನನ್ನ ಅಪ್ಪ, ಅಮ್ಮ, ಸೋದರ ಸಂಬಂಧಿ... ಎಲ್ಲರೂ ಕಲಾವಿದರೇ. ನನ್ನ ಅಜ್ಜ ಕೂಡ ಸಂಗೀತಗಾರರಾಗಿದ್ದರು. ಹೀಗಾಗಿ ಕಲೆಯ ಪ್ರಭಾವ ನಮ್ಮ ಕುಟುಂಬದ ಮೇಲಿದೆ. ಮನೆಯಲ್ಲೂ ಸಿನಿಮಾ, ಸಂಗೀತ, ಕಲೆಯ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಬಾಲ್ಯದಿಂದಲೂ ಸಿನಿಮಾಗಳ ಸುತ್ತ ಬೆಳೆದ ಕಾರಣ ಆಯುಷ್​ ಮತ್ತು ಐಶ್ವರ್ಯಾಗೂ ಚಿತ್ರರಂಗದ ಮೇಲೆ ಒಲವು ಜಾಸ್ತಿ. ಪಾಲಕರಾಗಿ ನಾವು ಸಪೋರ್ಟ್​ ಮಾಡಬಹುದು. ಆದರೆ, ಆಯುಷ್​ ಕೂಡ ಕಷ್ಟಪಡಬೇಕು' ಎನ್ನುತ್ತಾರೆ ಪ್ರಿಯಾಂಕಾ. ಜತೆಗೆ ಮುಂದಿನ ವರ್ಷ ನಿರ್ಮಾಣ ಮತ್ತು ನಿರ್ದೇಶನಕ್ಕೂ ಕೈ ಹಾಕಲು ಪ್ರಿಯಾಂಕಾ ಯೋಚಿಸುತ್ತಿದ್ದಾರಂತೆ.

ನಟ ಇಷ್ಟ, ನಿರ್ದೇಶಕ ಕಷ್ಟ!

ನಟ ಉಪೇಂದ್ರಗಿಂತ ನಿರ್ದೇಶಕ ಉಪೇಂದ್ರ ಎಲ್ಲರಿಗೂ ಅಚ್ಚುಮೆಚ್ಚು. ಪ್ರೇಕ್ಷಕಿ ಪ್ರಿಯಾಂಕಾಗೂ ಅಷ್ಟೇ ಅಂತೆ. ಆದರೆ, ಪತ್ನಿಯಾಗಿ ಕಷ್ಟ ಎನ್ನುತ್ತಾರವರು. "ಪತ್ನಿಯಾಗಿ ಉಪ್ಪಿ ನಟನಾಗಿದ್ದರೆ ಸಾಕು. ನಿರ್ದೇಶನ ಅಂತ ಬಂದರೆ ಅವರು ವಿಶ್ರಾಂತಿ ಪಡೆಯವುದಿಲ್ಲ. ಹಗಲು, ರಾತ್ರಿ ಎನ್ನದೇ ಕೆಲಸ ಮಾಡುತ್ತಾರೆ. ಊಟ, ನಿದ್ರೆಯ ಬಗ್ಗೆ ಗಮನ ಹರಿಸುವುದಿಲ್ಲ. ಆರೋಗ್ಯ ಕೆಟ್ಟರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರನ್ನು ನೋಡಿ ನಮಗೆ ಸ್ಟ್ರೆಸ್​ ಹೆಚ್ಚುತ್ತದೆ' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net