

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ಭೀಮ' ಚಿತ್ರದಲ್ಲಿ ಇನ್ಸ್ಪೆಕ್ಟರ್ ಗಿರಿಜಾ ಪಾತ್ರದಲ್ಲಿ ಮಿಂಚಿದ್ದ ನಟಿ ಪ್ರಿಯಾ ಷಠಮರ್ಷಣ ಇದೀಗ ಹ್ಯಾಟ್ರಿಕ್ ಚಿತ್ರಗಳಲ್ಲಿ ಖಾಕಿ ಧರಿಸಿದ್ದಾರೆ. "ಕಸ್ಟಡಿ', "ಕುಂಭ ಸಂಭವ' ಮತ್ತು "ಗಾಂಧಿ ಸ್ಕ್ವೇರ್' ಸಿನಿಮಾಗಳಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ, ಹೊಸ ಕೇಸ್ಗಳ ಬೆನ್ನು ಹತ್ತಿದ್ದಾರೆ. ""ಭೀಮ' ಚಿತ್ರದ ಇನ್ಸ್ಪೆಕ್ಟರ್ ಗಿರಿಜಾ ಪಾತ್ರಕ್ಕೆ ತುಂಬ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ಜತೆಗೆ 20ಕ್ಕೂ ಹೆಚ್ಚು ಅದೇ ರೀತಿಯ ಪೊಲೀಸ್ ಪಾತ್ರಗಳ ಆರ್ಸ್ ಬಂದವು. ಕಥೆ ಕೇಳಿ, ಒಂದೇ ರೀತಿಯ ಪಾತ್ರಗಳನ್ನು ಒಪ್ಪದೇ, ವಿಭಿನ್ನ ಕಥೆ, ಬೇರೆ ಬೇರೆ ಶೇಡ್ಗಳಿರುವ ಪಾತ್ರವನ್ನು ಮಾತ್ರ ಒಪ್ಪಿಕೊಂಡೆ. "ಭೀಮ'ದಲ್ಲಿ ನೆನಪಿಗಾಗಿ ಪೊಲೀಸ್ ಯೂನಿಾರಂ ತೆಗೆದಿಟ್ಟುಕೊಂಡಿದ್ದೆ. ಬಳಿಕ "ಕಸ್ಟಡಿ'ಗೆ ಇನ್ನೊಂದು ಯೂನಿಫಾರ್ಮ್, "ಕುಂಭ ಸಂಭವ'ಕ್ಕೆ ಮತ್ತೊಂದು ಯೂನಿಫಾರ್ಮ್ ತೆಗೆದುಕೊಂಡೆ. ಹೀಗೆ ನನ್ನ ಬಳಿ ಈಗ ಮೂರು ಖಾಕಿ ಯೂನಿಫಾರ್ಮ್ಗಳಿವೆ. ಬ್ಯಾಕ್ ಟು ಬ್ಯಾಕ್ ಪೊಲೀಸ್ ಪಾತ್ರಗಳಲ್ಲೇ ನಟಿಸುತ್ತಿರುವ ಕಾರಣ, ಕೆಲವೊಮ್ಮೆ ಶೂಟಿಂಗ್ ಅಲ್ಲ ಡ್ಯೂಟಿಗೆ ಹೋಗುತ್ತಿರುವ ಫೀಲ್ ಆಗುತ್ತದೆ. ಠಾಣೆಯಿಂದ ಠಾಣೆಗೆ ಟ್ರಾನ್ಸ್ರ್ ಆಗಿ, ಹೊಸ ಕೇಸ್ ತೆಗೆದುಕೊಂಡಿರುವಂತೆ ಭಾಸವಾಗುತ್ತದೆ' ಎಂದು ನಗುತ್ತಾರೆ ಪ್ರಿಯಾ.
ಜೆಜೆ ಶ್ರೀನಿವಾಸ್ ನಟಿಸಿ, ನಿರ್ದೇಶಿಸಿರುವ "ಕಸ್ಟಡಿ' ಇದೇ ಆ. 8ರಂದು ತೆರೆಗೆಬರಲಿದೆ. "ಮಹಿಳಾ ಪ್ರಧಾನ ಚಿತ್ರವಾದರೂ ಒಂದೊಳ್ಳೆ ಕಮರ್ಷಿಯಲ್ ಪ್ಯಾಕೇಜ್. ನಾನು ದುರ್ಗಾಪರಮೇಶ್ವರಿ ಎಂಬ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಸೈಬರ್ ಕ್ರೈಮ್ ಸುತ್ತ ನಡೆಯುವ ಕಥೆಯಲ್ಲಿ ಕೌಟುಂಬಿಕ, ಭಾವನಾತ್ಮಕ ಅಂಶಗಳಿವೆ. ಊಹೆಗೂ ನಿಲುಕದ ಟ್ವಿಸ್ಟ್-ರ್ಟನ್ಗಳಿವೆ. "ಭೀಮ' ರಿಯಲಿಸ್ಟಿಕ್ ಆಗಿದ್ದ ಕಾರಣ ನನಗೆ ಫೈಟ್ಗಳಿರಲಿಲ್ಲ. ಆದರೆ, "ಕಸ್ಟಡಿ'ಯಲ್ಲಿ ನನ್ನ ಪಾತ್ರವೇ ಹೀರೋ. ತರಬೇತಿ ಪಡೆದು, ರಿಹರ್ಸಲ್ ಮಾಡಿ ಸ್ಟಂಟ್ಸ್ ಮಾಡಿದ್ದೇನೆ. ಹೀಗಾಗಿ ಸಾಹಸ ಸನ್ನಿವೇಶಗಳು ಸವಾಲೆನಿಸಿತು' ಎಂದು ಮಾಹಿತಿ ನೀಡುತ್ತಾರೆ.
"ಕಸ್ಟಡಿ' ಜತೆಗೆ ಪ್ರಿಯಾ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿರುವ "ಕುಂಭಸಂಭವ' ಮತ್ತು "ಗಾಂಧೀ ಸ್ಕ್ವೇರ್' ಚಿತ್ರಗಳ ಶೂಟಿಂಗ್ ಪೂರ್ಣಗೊಂಡಿದೆ. ಹಾಗೇ "ರುಧಿರವನಂ' ಸೇರಿ ಇನ್ನೂ ಎರಡು ಹೊಸ ಚಿತ್ರಗಳಿಗೆ ಅವರು ಸೈನ್ ಮಾಡಿದ್ದಾರಂತೆ. ಇನ್ನು ರಂಗಭೂಮಿಯಿಂದ ಹಿನ್ನೆಲೆಯ ಪ್ರಿಯಾ, ಪತಿ "ಕನ್ನಡಕ್ಕಾಗಿ ಒಂದನ್ನು ಒತ್ತಿ' ಖ್ಯಾತಿಯ ನಟ ಅವಿನಾಶ್ ಷಠಮರ್ಷಣ ಇಬ್ಬರೂ ಉತ್ತಮ ಗಾಯಕರು ಕೂಡ. ಹೀಗಾಗಿ ಈ ಜೋಡಿ "ಸೋಹಂ' ಎಂಬ ವಿಡಿಯೋ ಆಲ್ಬಂ ಮಾಡಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕೆಲ ಹಾಡುಗಳ ಸಂಗೀತದ ಕಾರ್ಯ ಮುಗಿದಿದ್ದು, ಇತ್ತೀಚೆಗಷ್ಟೆ ಹಂಪಿಯಲ್ಲಿ ಮೊದಲ ಹಾಡಿನ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. "ಅವಿನಾಶ್ಗೆ ಹಲವು ವರ್ಷಗಳಿಂದ ಮ್ಯೂಸಿಕ್ ಬ್ಯಾಂಡ್ ಮಾಡುವ ಆಸೆ ಇತ್ತು. ಅದೀಗ ನೆರವೇರುತ್ತಿದೆ. ಆರು ಹಾಡುಗಳು ರೆಡಿಯಾಗಿವೆ. ಭಜನೆ, ಜಾನಪದ, ಭಾವಗೀತೆ ಸೇರಿ ಎಲ್ಲ ಜಾನರ್ ಹಾಡುಗಳನ್ನು ಮಾಡುವ ಆಲೋಚನೆ ಇದೆ' ಎನ್ನುತ್ತಾರೆ ಪ್ರಿಯಾ.