

ಬೆಂಗಳೂರು: ಒಂದನ್ನು ಪಡೆದುಕೊಳ್ಳಲು ಇನ್ನೊಂದನ್ನು ಕಳೆದುಕೊಳ್ಳಬೇಕು ಎಂಬ ಮಾತಿನಂತೆ ಇಲ್ಲೊಬ್ಬರು ಸಿನಿಮಾಗಾಗಿ ಉದ್ಯೋಗವನ್ನೇ ತೊರೆದಿದ್ದಾರೆ. ಸಾಫ್ಟ್ವೇರ್ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ಪ್ರಿಯಾ ಹೆಗ್ಡೆ, ಕೆಲಸಕ್ಕೆ ಗುಡ್ಬೈ ಹೇಳಿ ಸ್ಯಾಂಡಲ್ವುಡ್ಗೆ ಪ್ರವೇಶಿಸಿದ್ದಾರೆ. ಮಾತ್ರವಲ್ಲ, ಕನ್ನಡ ಸಿನಿಮಾ ಬಿಡುಗಡೆಗೂ ಮುನ್ನ ತೆಲುಗಿನ ಎರಡೆರಡು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಮೂಲತಃ ಕರಾವಳಿಯವರಾದ ಪ್ರಿಯಾ ಹೆಗ್ಡೆ, ಕವೀಶ್ ಶೆಟ್ಟಿ ನಿರ್ವಣ-ನಿರ್ದೇಶನ ಜತೆಗೆ ನಾಯಕನಾಗಿಯೂ ಅಭಿನಯಿಸಿರುವ ‘ಜಿಲ್ಕ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಮೂವರು ನಾಯಕಿಯರಲ್ಲಿ ಒಬ್ಬರಾಗಿ ಪ್ರಿಯಾ ಕಾಣಿಸಿಕೊಂಡಿದ್ದಾರೆ. ‘ಜಿಲ್ಕ’ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಮಧ್ಯೆ ಪ್ರಿಯಾ 2 ತೆಲುಗು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನಲ್ಲಿ ‘ಮಿತ್ರ’ ಹಾಗೂ ‘ನುವ್ವೇ ನಾ ಪ್ರಾಣಂ’ ಸಿನಿಮಾಗಳ ನಾಯಕಿಯಾಗಿದ್ದು, ಎರಡೂ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ.
‘ಮಿತ್ರ ಚಿತ್ರದಲ್ಲಿ ನನ್ನದು ಟೈಟಲ್ ರೋಲ್. ಅದು ಹಾರರ್ ಸಸ್ಪೆನ್ಸ್ ಥ್ರಿಲ್ಲರ್. ‘ನುವ್ವೇ ನಾ ಪ್ರಾಣಂ’ ಚಿತ್ರದಲ್ಲಿ ಪ್ರೇಮ ಕಥಾನಕವಾದರೂ ಸಂಪ್ರದಾಯಸ್ಥ ಹುಡುಗಿಯ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದೇನೆ’ ಎಂದು ಎರಡೂ ಚಿತ್ರ ಹಾಗೂ ಪಾತ್ರದ ಕುರಿತು ವಿವರಿಸಿದರು ಪ್ರಿಯಾ. ‘ನಟಿಯಾಗಬೇಕು ಎಂಬುದು ನನ್ನ ಬಾಲ್ಯದ ಕನಸು. ಚಿಕ್ಕಂದಿನಲ್ಲಿ ಸಿನಿಮಾ ನೋಡುವಾಗಲೆಲ್ಲ ನಾಯಕಿಯ ಸ್ಥಾನದಲ್ಲಿ ನನ್ನನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಆಮೇಲೆ ಸಾಫ್ಟ್ವೇರ್ ಇಂಜಿನಿಯರ್ ಆದರೂ ಆ ಕನಸು ದೂರವಾಗಲಿಲ್ಲ. ‘ದಗಲ್ಬಾಜಿ’ ಎಂಬ ತುಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದೆ. ‘ಜಿಲ್ಕ’ ಮೂಲಕ ನಾಯಕಿಯಾದೆ’ ಎನ್ನುವ ಪ್ರಿಯಾ, ಟಾಲಿವುಡ್ಗೆ ಪ್ರವೇಶಿಸಿದ್ದು ಅಚಾನಕ್ ಆಗಿ ಎನ್ನುತ್ತಾರೆ.
‘ಸಿನಿಮಾಗೆ ಬರುವ ಉದ್ದೇಶದಿಂದಲೇ ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡಿದ್ದೆ. ಒಂದು ದಿನ ‘ನುವ್ವೇ ನಾ ಪ್ರಾಣಂ’ ಚಿತ್ರತಂಡ ಅದಾಗಲೇ ಗುರುತಿಸಿದ್ದ ನಾಲ್ಕೈದು ಜನರನ್ನು ಆಡಿಷನ್ ಮಾಡಿ ಅಂತಿಮ ಗೊಳಿಸಲು ಬೆಂಗಳೂರಿಗೆ ಬಂದಿತ್ತು. ಆದರೆ ಅಂದು ಆ ಪೈಕಿ ಒಬ್ಬ ಆಕಾಂಕ್ಷಿ ಬಂದಿರಲಿಲ್ಲ. ಆಡಿಷನ್ ಕೋ-ಆರ್ಡಿನೇಟರ್ ನನಗೆ ಪರಿಚಿತರಾಗಿರುವುದರಿಂದ ಕರೆ ಮಾಡಿ ತಕ್ಷಣ ಆಡಿಷನ್ಗೆ ಹೋಗಲು ಹೇಳಿದರು. ಅಲ್ಲಿ ಮಾತುಕತೆ ನಡೆಸಿದ ಚಿತ್ರತಂಡ ನನ್ನನ್ನೇ ಆಯ್ಕೆ ಮಾಡಿತು. ಅವರಿಗೆ ನನ್ನ ಹೈಟ್ ಇಷ್ಟ ಆಯಿತಂತೆ. ಆ ಚಿತ್ರಕ್ಕಾಗಿ ಕೆಲಸ ಬಿಡುವುದು ಅನಿವಾರ್ಯವಾಯಿತು’ ಎನ್ನುತ್ತ ಟಾಲಿವುಡ್ ಎಂಟ್ರಿ ಬಗ್ಗೆ ಹೇಳಿದರು. ‘‘ನುವ್ವೇ ನಾ ಪ್ರಾಣಂ’ ಸಿನಿಮಾದಲ್ಲಿ ಕನ್ನಡದವರೇ ಆದ ಕಿರಣ್ಕುಮಾರ್ ನಾಯಕ. ಇದರ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾಗಲೇ ‘ಮಿತ್ರ’ ಚಿತ್ರದ ಆಫರ್ ಸಿಕ್ಕಿತು’ ಎಂದರು ಪ್ರಿಯಾ.
ಸಾಫ್ಟ್ವೇರ್ ಕಂಪನಿಯ ಉದ್ಯೋಗ ಬಿಟ್ಟಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ. ಆಗ ಜೀವನೋಪಾಯಕ್ಕಾಗಿ ಅಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಇಲ್ಲಿ ಆತ್ಮತೃಪ್ತಿ ಸಿಗುತ್ತಿದೆ. | ಪ್ರಿಯಾ ಹೆಗ್ಡೆ ನಟಿ