ಪ್ರೇಕ್ಷಕರಿ 'ಪ್ರೇಮ' ನಿವೇದನೆ: ವೆಡ್ಡಿಂಗ್​ ಗಿಫ್ಟ್​ ಚಿತ್ರ ಮುಗಿಸಿದ ಚಂದ್ರಮುಖಿ

photo_2022-01-09_00-45-33
Published on

ಬೆಂಗಳೂರು: ‘ಇಲ್ಲಿಯವರೆಗೂ ಪ್ರೇಮಾ ಏನಾಗಿದ್ದಾಳೋ ಅದೆಲ್ಲದಕ್ಕೂ ಪ್ರೇಕ್ಷಕರೇ ಕಾರಣ. ಅದರ ಸಂಪೂರ್ಣ ಕ್ರೆಡಿಟ್ ಅವರಿಗೇ ಸಲ್ಲಬೇಕು. ಸಿನಿಮಾ ಮಾಡುವುದನ್ನು ಬಿಟ್ಟರೂ, ಜನ ನನ್ನನ್ನು ಮರೆತಿಲ್ಲ ಎಂಬುದೇ ನನ್ನ ಪಾಲಿನ ದೊಡ್ಡ ಖುಷಿ. ಅದೇ ರೀತಿ ಒಳ್ಳೊಳ್ಳೆ ನಿರ್ದೇಶಕರ ಸಿನಿಮಾಗಳ ಭಾಗವಾಗಿದ್ದೂ ನನ್ನ ಪುಣ್ಯ ...’- ಹೀಗೆ ಸಿನಿಪಯಣವನ್ನು ಕೊಂಚ ರಿವೈಂಡ್ ಮಾಡಿಕೊಂಡರು ನಟಿ ಪ್ರೇಮಾ.

ವಿಕ್ರಮ್ ಪ್ರಭು ನಿರ್ದೇಶನ ಮತ್ತು ನಿರ್ವಣದ ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಮುಹೂರ್ತ ಎರಡು ತಿಂಗಳ ಹಿಂದಷ್ಟೇ ನಡೆದಿತ್ತು. ಇದೀಗ ಸದ್ದಿಲ್ಲದೆ 37 ದಿನಗಳಲ್ಲಿ ಚಿತ್ರದ ಸಂಪೂರ್ಣ ಶೂಟಿಂಗ್ ಮುಗಿದಿದೆ. ಈ ವಿಷಯವನ್ನು ಹೇಳಿಕೊಳ್ಳಲೆಂದೇ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಈ ವೇಳೆ ಸಿನಿಮಾದಲ್ಲಿನ ಪಾತ್ರ ಸೇರಿ ಹಲವು ವಿಚಾರಗಳನ್ನು ಹೇಳಿಕೊಂಡರು ಪ್ರೇಮಾ.

‘ಈವರೆಗೂ ನನ್ನ ಸಿನಿ ಕೆರಿಯರ್ ನಲ್ಲಿ ಈ ತರಹದ ಪಾತ್ರ ಮಾಡಿಲ್ಲ. ನನ್ನ ಪಾಲಿಗೆ ಅಷ್ಟೇ ಸವಾಲಿನ ಮತ್ತು ಹೊಸ ರೀತಿಯ ಕಥೆ ಇದು. ಕೋರ್ಟ್ ರೂಮ್ ಡ್ರಾಮಾ ಅಂದ ಕೂಡಲೇ ಮೊದಲಿಗೆ ಭಯ ಇತ್ತು. ಈ ಪಾತ್ರ ನಾನು ನಿಭಾಯಿಸಬಹುದೇ ಎಂದು ನಾನೇ ಪ್ರಶ್ನಿಸಿಕೊಂಡೆ. ಯಾವುದೇ ರೆಫರೆನ್ಸ್ ಇಲ್ಲದೆ, ಚಿತ್ರ ಮೂಡಿಬಂದಿದೆ. ಸಣ್ಣ ಎಳೆ ಹೇಳಿದರೂ ಕಥೆ ಬಿಟ್ಟುಕೊಟ್ಟಂತಾಗುತ್ತದೆ. ತಡವಾಗಿ ಬಂದರೂ, ವಿಶೇಷ ಚಿತ್ರದ ಜತೆಗೆಯೇ ಪ್ರೇಮಾ ಬಂದಿದ್ದಾರೆ ಎಂದು ಚಿತ್ರ ನೋಡಿದವರು ಹೇಳಿದರೆ ಅಷ್ಟೇ ಸಾಕು. ಒಳ್ಳೆಯ ಪಾತ್ರಗಳು ಸಿಕ್ಕರೆ ಸಿನಿಮಾದಲ್ಲಿಯೇ ಮುಂದುವರಿಯುತ್ತೇನೆ. ಹೆಚ್ಚು ಕಾಯಿಸುವುದಿಲ್ಲ’ ಎಂಬುದು ಪ್ರೇಮಾ ಮಾತು.

ಹಿಂದೆಂದೂ ಮಾಡದ ಪಾತ್ರ ನನ್ನದು: ‘ಇಲ್ಲಿಯವರೆಗೆ ನೋಡಿದ ಪ್ರೇಮಾನೇ ಬೇರೆ, ‘ವೆಡ್ಡಿಂಗ್ ಗಿಫ್ಟ್’ ಪ್ರೇಮಾನೇ ಬೇರೆ’ ಎನ್ನುವ ಪ್ರೇಮಾ, ‘ತುಂಬ ವರ್ಷಗಳ ಬಳಿಕ ಸಿನಿಮಾಕ್ಕೆ ಮತ್ತೆ ಬರುತ್ತಿದ್ದೇನೆ ಎಂದರೆ ಅದು ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಸಲುವಾಗಿ. ನಿರ್ದೇಶಕರು ಈ ಚಿತ್ರಕ್ಕೆ ನೀವೇ ಬೇಕು ಎಂದು ನೀಟಾಗಿ ಕಥೆ ಹೇಳಿದ ಎರಡೇ ಗಂಟೆಗೆ ಸಿನಿಮಾ ಒಪ್ಪಿದೆ. ಇಲ್ಲದಿದ್ದರೆ ನಾನು ಸಿನಿಮಾ ಒಪ್ಪಲು ಏನಿಲ್ಲ ಅಂದರೂ ಎರಡ್ಮೂರು ದಿನವೇ ಬೇಕಿತ್ತು’ ಎಂದು ಮನಸ್ಸಿಗೆ ಇಷ್ಟವಾಗುವ ಕಥೆ ಮತ್ತು ಪಾತ್ರ ಸಿಕ್ಕ ಖುಷಿಯನ್ನು ಹೇಳಿಕೊಂಡರು ನಟಿ ಪ್ರೇಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net