ಫೈವ್‌ಸ್ಟಾರ್ ನಿಖಿತಾ: ನಟಿಯ ಐದು ಸಿನಿಮಾಗಳು ಬಿಡುಗಡೆಗೆ ಸಿದ್ಧ

nikhitha (1)
Published on

ಬೆಂಗಳೂರು: ಕನ್ನಡದ ‘ಇದು ಆಕಾಶವಾಣಿ ಬೆಂಗಳೂರು ನಿಲಯ’, ‘ಜಲ್ಲಿಕಟ್ಟು’ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ನಿಖಿತಾ ಸ್ವಾಮಿ ಸದ್ಯ ಬ್ಯಾಕ್ ಟು ಬ್ಯಾಕ್ ಐದು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅದರಲ್ಲಿ ‘ಟಕಿಲಾ’ ಇಂದು ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಕರ್ನಾಟಕ ಚಲನಚಿತ್ರ ಆಕಾಡೆಮಿ ಸದಸ್ಯರಾಗಿಯೂ ಅವರು ನಾಮನಿರ್ದೇಶನಗೊಂಡಿದ್ದಾರೆ. ಇದೇ ಖುಷಿಯಲ್ಲಿ ನಿಖಿತಾ ಸಿನಿಮಾ ಹಾಗೂ ಹುದ್ದೆಯ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ. ‘ಸದ್ಯ ನಾನು ನಟಿಸಿರುವ ಐದು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಅದರಲ್ಲಿ ಧರ್ಮ ಕೀತೀರಾಜ್ ಜತೆ ಅಭಿನಯಿಸಿರುವ ‘ಟಕಿಲಾ’ ಇಂದು ರಿಲೀಸ್ ಆಗುತ್ತಿದೆ. ಇದೊಂದು ಮಹತ್ವದ ಪ್ರಾಜೆಕ್ಟ್. ನಿರ್ದೇಶಕ ಪ್ರವೀಣ್ ನಾಯಕ್ ಕಥೆ ಹೇಳಿದಾಗ, ನಾನು ಎರಡು ದಿನ ಸಮಯ ಕೇಳಿದ್ದೆ. ಇಲ್ಲಿ ಮಹಿಳೆ ಕುರಿತಂತೆ ಸ್ಟ್ರಾಂಗ್ ಕಂಟೆಂಟ್ ಇದೆ. ಹೊಸಬಳಾಗಿ ನಾನು ಇದನ್ನು ಮಾಡಬಹುದಾ ಎಂದು ನನಗೆ ನಾನೇ ಪ್ರಶ್ನಿಸಿಕೊಂಡೆ. ಬಳಿಕ ಎರಡು ದಿನದ ಬಳಿಕ ಮತ್ತೊಂದು ಮೀಟಿಂಗ್‌ನಲ್ಲಿ, ಪ್ರವೀಣ್ ಸರ್ ಪಾತ್ರದ ಬಗ್ಗೆ ಸ್ಪಷ್ಟವಾಗಿ ಹೇಳಿದರು. ಕಥೆ ಇಷ್ಟವಾಗಿ ಒಪ್ಪಿಕೊಂಡೆ. ಬಳಿಕ ಈ ಚಿತ್ರದ ಮೂಲಕ ಧರ್ಮರನ್ನು ನಾನು ಮೊದಲ ಬಾರಿಗೆ ಭೇಟಿ ಮಾಡಿದ್ದು, ಅವರು ಕೂಡ ಸಪೋರ್ಟಿವ್ ಆಗಿ ಕೆಲಸ ಮಾಡುತ್ತಾರೆ. ಆ್ಯಕ್ಟಿಂಗ್ ಬಗ್ಗೆ ಹೇಳಿಕೊಡುತ್ತಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಜೀವನದಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದರ ಕುರಿತು ಹೇಳಲು ಹೊರಟಿದ್ದೇವೆ. ಅತಿಯಾದರೆ ಅಮೃತವೂ ವಿಷ ಎನ್ನುವುದನ್ನು ‘ಟಕಿಲಾ’ ನಿರೂಪಿಸುತ್ತದೆ’ ಎಂದು ಮಾಹಿತಿ ನೀಡುತ್ತಾರೆ. ಸದ್ಯ ನಿಖಿತಾ ನಟನೆಯ ‘ಫಸ್ಟ್ ನೈಟ್ ವಿಥ್ ದೆವ್ವ’, ‘ಮುದುಡಿದ ಎಲೆಗಳು’, ‘ಗಂಗೆ ಗೌರಿ’ ಹಾಗೂ ‘ಎಸ್ ಸೈಲೆನ್ಸ್’ ಚಿತ್ರಗಳು ಶೂಟಿಂಗ್ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಸಿದ್ಧವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net