ಸದ್ಯದಲ್ಲೇ ಡಾ. ಮೇಘನಾ... ಆಸ್ಕರ್: ಪ್ರಶಸ್ತಿ ಪಡೆದ ಕಾದಂಬರಿ ಆಧಾರಿತ ಚಿತ್ರಗಳ ಬಗ್ಗೆ ಪಿಎಚ್​ಡಿ

Meghana
Published on

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಮಂದಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈಗಷ್ಟೇ ಅಲ್ಲೊಂದು ಇಲ್ಲೊಂದು ಚಿತ್ರತಂಡಗಳು ಶೂಟಿಂಗ್ ಮಾಡಿಕೊಳ್ಳಲು ಮುಂದೆ ಬಂದಿವೆ. ಮನೆಯಲ್ಲಿರುವವರು ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ನಟಿ ಮೇಘನಾ ಗಾಂವ್ಕರ್ ಎಲ್ಲಕ್ಕಿಂತ ವಿಭಿನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಲಾಕ್​ಡೌನ್ ಅವಧಿಯಲ್ಲಿಯೇ ಪಿಎಚ್​ಡಿ ಕೆಲಸ ಶುರುವಿಟ್ಟುಕೊಂಡಿದ್ದಾರೆ. ಸಿನಿಮಾದ ಜತೆಗೆ ಇಂಗ್ಲಿಷ್ ಸಾಹಿತ್ಯದ ಕಡೆಗೂ ಮೇಘನಾ ಆಸಕ್ತಿ ಉಳ್ಳವರು. ಅವರ ಸೋಷಿಯಲ್ ಮೀಡಿಯಾ ಖಾತೆಯನ್ನು ಗಮನಿಸಿದರೆ, ಅಲ್ಲಿ ಸದಾ ಹೊಸ ಹೊಸ ಪುಸ್ತಕಗಳನ್ನು ಓದುವ ಬಗ್ಗೆ ಮಾಹಿತಿ ಹಂಚಿಕೊಂಡಿರುತ್ತಾರೆ. ಜತೆಗೆ ಸದ್ದಿಲ್ಲದೆ, ಪಿಎಚ್​ಡಿ ಥೀಸಿಸ್ ಮಂಡಿಸಲು ಸಿದ್ಧರಾಗುತ್ತಿದ್ದಾರೆ.

ಅಂದಹಾಗೆ, ಮೇಘನಾ ಆಯ್ದುಕೊಂಡ ವಿಷಯವೂ ಅಷ್ಟೇ ವಿಶೇಷವಾಗಿದೆ. ಕಾದಂಬರಿ ಆಧಾರಿತ ಸಿನಿಮಾಗಳನ್ನೇ ಪಿಎಚ್​ಡಿ ವಿಷಯವಾಗಿ ಆಯ್ದುಕೊಂಡಿದ್ದಾರೆ ಮೇಘನಾ. ಆ ಬಗ್ಗೆ ಸ್ವತಃ ‘ವಿಜಯವಾಣಿ’ ಜತೆ ಅವರೇ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ‘ಒಂದೂವರೆ ವರ್ಷದಿಂದ ನಾನು ಪಿಎಚ್​ಡಿ ಮಾಡುತ್ತಿದ್ದೇನೆ. ಆಸ್ಕರ್ ಪ್ರಶಸ್ತಿ ಪಡೆದ ಕಾದಂಬರಿ ಆಧಾರಿತ ಸಿನಿಮಾಗಳನ್ನು ವಿಷಯವನ್ನಾಗಿ ನಾನು ಆಯ್ಕೆ ಮಾಡಿಕೊಂಡಿದ್ದೇನೆ. ಅದರಲ್ಲಿ ಆರು ಕಾದಂಬರಿಗಳು ಮತ್ತು ಆರು ಸಿನಿಮಾಗಳು ಇರಲಿವೆ. ಈಗಾಗಲೇ ಮಾಹಿತಿ ಸಂಗ್ರಹದ ಕೆಲಸ ಶುರುವಾಗಿದ್ದು, ಮುಂಬೈ ವಿಶ್ವವಿದ್ಯಾಲಯ ಪಿಎಚ್​ಡಿ ನೀಡಲಿದೆ’ ಎನ್ನುತ್ತಾರೆ.

ಇನ್ನು ಲಾಕ್​ಡೌನ್ ಹಿನ್ನೆಲೆಯಲ್ಲಿ ತರಗತಿಗಳು ನಡೆಯುತ್ತಿಲ್ಲ. ಆನ್​ಲೈನ್ ಮೂಲಕವೇ ತರಗತಿಗೆ ಹಾಜರಿ ಹಾಕುತ್ತಿರುವ ಮೇಘನಾ, ಓದಿನ ಜತೆಗೆ ಸಿನಿಮಾ ಸಂಬಂಧಿ ಕೆಲಸಗಳಲ್ಲಿಯೂ ಬಿಜಿಯಾಗಿದ್ದಾರೆ. ‘ಕ್ರಿಯೇಟಿವ್ ಆಗಿ ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಕವಿತೆಗಳನ್ನು ಬರೆಯುತ್ತಿದ್ದೇನೆ. ಚಿಕ್ಕ ಚಿಕ್ಕ ಸ್ಟೋರಿಗಳು, ಸಿನಿಮಾ ವೀಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಎಂದಿನಂತೆ ಯೋಗ, ಡಯಟ್ ಸಹ ಚಾಲ್ತಿಯಲ್ಲಿದೆ’ ಎನ್ನುವ ಮೇಘನಾ ಕಾದಂಬರಿ ಬರೆಯುವ ಬಗ್ಗೆಯೂ ಯೋಜನೆ ಹಾಕಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಂತೋಷ್ ನಿರ್ದೇಶನದ ‘ಶುಭಮಂಗಳ’ ಸಿನಿಮಾದಲ್ಲಿ ಮೇಘನಾ ನಟಿಸಿದ್ದು, ಕರೊನಾ ಇಲ್ಲದಿದ್ದರೆ, ಇಷ್ಟೊತ್ತಿಗಾಗಲೇ ಸಿನಿಮಾ ತೆರೆಕಂಡಿರಬೇಕಿತ್ತು. ಇದೀಗ ಒಟಿಟಿಯಲ್ಲಿ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದೆ ತಂಡ. ಅದಲ್ಲದೆ, ‘ಕರ್ವ 3’ ಚಿತ್ರವೂ ಅಕ್ಟೋಬರ್ ವೇಳೆಗೆ ಶುರುವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net