ಲವ್ 360ಗೆ ಕಾವ್ಯಾ ವಿಲನ್; ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ನಟನೆ

Kavya
Published on

‘ಲವ್ 360’ ಚಿತ್ರಕ್ಕೆ ಆಕ್ಷನ್-ಕಟ್ ಹೇಳುವ ಮೂಲಕ, ಮೂರು ವರ್ಷಗಳ ನಂತರ ಶಶಾಂಕ್ ನಿರ್ದೇಶನಕ್ಕೆ ಮರಳುತ್ತಿರುವ ವಿಷಯ ಗೊತ್ತೇ ಇದೆ. ಪ್ರವೀಣ್ ಎಂಬ ಹೊಸ ಪ್ರತಿಭೆಯನ್ನು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಅವರು ಪರಿಚಯಿಸುತ್ತಿದ್ದಾರೆ. ಪ್ರವೀಣ್​ಗೆ ನಾಯಕಿಯಾಗಿ ರಚನಾ ಇಂದರ್ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಅವರಿಬ್ಬರ ಫಸ್ಟ್​ಲುಕ್ ಸಹ ಬಿಡುಗಡೆಯಾಗಿದೆ. ಇದೀಗ ಇದೇ ಬಳಗಕ್ಕೆ ನಟಿ ಕಾವ್ಯಾ ಶಾಸ್ತ್ರಿ ಸಹ ಸೇರ್ಪಡೆಗೊಂಡಿದ್ದಾರೆ. ವಿಶೇಷವೆಂದರೆ, ಅವರಿಗಿಲ್ಲಿ ನೆಗೆಟಿವ್ ಶೇಡ್!

ಶಶಾಂಕ್ ಸಿನಿಮಾ ಅಂದರೆ ಅಲ್ಲಿ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ. ಅದು ಅವರ ಈ ಹಿಂದಿನ ಸಿನಿಮಾಗಳಲ್ಲಿಯೂ ಸಾಬೀತಾಗಿದೆ. ಇದೀಗ ಶೀರ್ಷಿಕೆಯೇ ಹೇಳುವಂತೆ ‘ಲವ್ 360’ ಸಿನಿಮಾ ಪ್ರೇಮಕಥೆಯ ಹಿನ್ನೆಲೆಯನ್ನೇ ಸಾರುತ್ತದೆ. ಈ ಪ್ರೇಮಕಥೆಯಲ್ಲಿ ಕಾವ್ಯಾಗೂ ಅಷ್ಟೇ ಮಹತ್ವದ ಪಾತ್ರವನ್ನು ನೀಡಿದ್ದಾರೆ ಶಶಾಂಕ್. ‘ಇಷ್ಟು ವರ್ಷಗಳಲ್ಲಿ ನಾನು ನೆಗೆಟಿವ್ ಮತ್ತು ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಸಂಪ್ರದಾಯಬದ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಶಶಾಂಕ್ ಕಥೆ ಹೇಳಿದಾಗ ಖುಷಿ ಆಯಿತು. ನೆಗೆಟಿವ್ ಪಾತ್ರ ಮಾಡಬೇಕೆಂದು ಪ್ರತಿಯೊಬ್ಬ ಕಲಾವಿದರ ಆಸೆ. ನಟನೆಗೂ ಅಲ್ಲಿ ಸ್ಕೋಪ್ ಜಾಸ್ತಿ. ಹಾಗಾಗಿ ಒಪ್ಪಿಕೊಂಡೆ. ಅದೇ ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿದ್ದೇನೆ’ ಎನ್ನುತ್ತಾರೆ ಕಾವ್ಯಾ.

ಅವರಿಗೆ ಚಿತ್ರದಲ್ಲಿ ಈ ಪಾತ್ರ ಸಿಗುವುದಕ್ಕೆ ಹೇರ್​ಸ್ಟೈಲ್ ಸಹ ಕಾರಣವಂತೆ. ‘ಯಾವಾಗ ಶಾರ್ಟ್ ಹೇರ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡೆನೋ, ಆಗಿನಿಂದಲೇ ಹಲವು ಆಫರ್​ಗಳು ಬರುತ್ತಿವೆ. ಕ್ಯಾನ್ಸರ್ ರೋಗಿಗಳಿಗೆ ನೀಡುವ ಸಲುವಾಗಿ ಹೇರ್ ಕಟ್ ಮಾಡಿಸಿದ್ದೆ. ಅದರಿಂದಲೇ ನನ್ನ ಕರಿಯರ್​ಗೂ ಅನುಕೂಲವಾಗುತ್ತಿದೆ’ ಎನ್ನುತ್ತಾರವರು. ಅಂದಹಾಗೆ, ಶಶಾಂಕ್ ಸಿನಿಮಾಸ್ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ವಣವಾಗುತ್ತಿದೆ. ಕಳೆದ ವಾರದಿಂದ ಶೂಟಿಂಗ್ ಸಹ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net