

ಬೆಂಗಳೂರು: ತರುಣ್ ಚಂದ್ರ ಅಭಿಯನದ ‘ಸೀನ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದವರು ನಟಿ ಕಾರುಣ್ಯ ರಾಮ್. ಆದರೆ, ಅವರಿಗೆ ಬಿಗ್ ಬ್ರೇಕ್ ನೀಡಿದ್ದು 2015ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ ‘ವಜ್ರಕಾಯ’ ಸಿನಿಮಾ. ಬಳಿಕ ‘ಕಿರಗೂರಿನ ಗಯ್ಯಳಿಗಳು’, ‘ಎರಡು ಕನಸು’ ಹಾಗೂ ‘ಪೆಟ್ರೋಮ್ಯಾಕ್ಸ್’ ಸೇರಿ ಹಲವು ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಕ್ರಮೇಣ ಬೇರೆ ಉದ್ಯಮದಲ್ಲಿ ಬಿಜಿಯಾದ ಕಾರುಣ್ಯ ಕಳೆದ ಎರಡು ವರ್ಷಗಳಿಂದ ಬ್ರೇಕ್ ಪಡೆದಿದ್ದರು. ಇದೀಗ ಮತ್ತೆ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದ್ದು, ಹೀಗಾಗಿ ಈ ಬಾರಿಯ ನವರಾತ್ರಿ ಹಬ್ಬ ಅವರಿಗೆ ವಿಶೇಷವಾಗಿರಲಿದೆ. ‘ದಸರಾವನ್ನು 10 ದಿನಗಳ ಕಾಲವೂ ಆಚರಿಸುತ್ತೇವೆ. ಮನೆಯಲ್ಲಿ ಸರಳವಾಗಿ ಆಚರಿಸಿದರೂ, ಹಬ್ಬದ ಹತ್ತು ದಿನವೂ ಒಂದೊಂದು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡುತ್ತೇವೆ. ಮನೆಯ ಹತ್ತಿರ ಇರುವ ಧ್ಯಾನ ಮಂದಿರದಲ್ಲಿ ಪ್ರತಿದಿನ ದೇವಿಗೆ ಹೋಮ ನಡೆಯುತ್ತವೆ. ಲಲಿತಾ ಸಹಸ್ರನಾಮ, ತ್ರಿಶತಿ ಹೋಮ, ಚಂಡಿಕಾ, ಕಾಳಿ ಹೋಮಗಳನ್ನು ನಡೆಸುತ್ತೇವೆ. ಅದರಲ್ಲಿ ನಾನು ಭಾಗಿಯಾಗುವೆ’ ಎಂದು ಮಾಹಿತಿ ನೀಡುತ್ತಾರೆ.
ಒಂಬತ್ತು ದಿನಗಳ ವ್ರತ: ಕಾರುಣ್ಯ ರಾಮ್ ನವರಾತ್ರಿಯ ಒಂಬತ್ತು ದಿನಗಳ ಕಾಲ ವ್ರತ ಕೈಗೊಳ್ಳುತ್ತಾರಂತೆ. ಈ ಬಗ್ಗೆ ‘ನವರಾತ್ರಿ ಅಂಗವಾಗಿ ನಾನು ಕೂಡ ಒಂಬತ್ತು ದಿನ ವ್ರತ ಮಾಡುತ್ತಿದ್ದೇನೆ. ದೇವಿ ಪೂಜೆ ಮಾಡಿ ಬಳಿಕ ಲಲಿತಾ ಸಹಸ್ರಮಾನವನ್ನು ಪಠಿಸುತ್ತೇನೆ’ ಎಂದ ಅವರು, ‘ಇನ್ನು ಒಂಬತ್ತು ದಿನವೂ ಬೇರೆ ಬೇರೆ ಕಡೆಯ ದಸರಾ ಆಚರಣೆಯಲ್ಲಿ ಭಾಗಿಯಾಗುತ್ತಿದ್ದೇನೆ. ಗುರುವಾರದಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ’ ಎನ್ನುತ್ತಾರೆ. ಶಾಲಾ ದಿನಗಳಲ್ಲಿ ಮೈಸೂರು ದಸರಾ ವೀಕ್ಷಿಸಿದ್ದ ಕಾರುಣ್ಯ ರಾಮ್ ಬಳಿಕ ಚಿತ್ರರಂಗದಲ್ಲಿ ಬಿಜಿಯಾದ ಕಾರಣ ಹೋಗಲು ಸಾಧ್ಯವಾಗಿಲ್ಲವಂತೆ. ಆದರೆ ಈ ಬಾರಿ ಮೈಸೂರಿಗೆ ಭೇಟಿ ನೀಡಿ, ದಸರಾ ವೈಭವ ವೀಕ್ಷಿಸಿ, ಚಾಮುಂಡಿ ದೇವಿಯ ಆಶೀರ್ವಾದ ಪಡೆಯಲಿದ್ದಾರಂತೆ.
ನವೆಂಬರ್‌ಗೆ ಶುಭಸುದ್ದಿ: ಕಳೆದ ಎರಡು ವರ್ಷಗಳಿಂದ ಸಿನಿ ಚಟುವಟಿಕೆಗಳಿಂದ ದೂರವಿದ್ದ ಕಾರುಣ್ಯಗೆ ಈ ಬಾರಿಯ ದಸರಾ ನವೋತ್ಸಾಹ ತಂದಿದೆ. ಅದಕ್ಕೆ ಕಾರಣವನ್ನೂ ಅವರೇ ತಿಳಿಸಿದ್ದು, ‘ಕರೊನಾ ಬಳಿಕ ನಾನು ಸಿನಿಮಾಗಳಿಂದ ದೂರವಿದ್ದೆ. ಆದರೆ, ಈ ನವರಾತ್ರಿಗೆ ಮತ್ತೆ ಸಿನಿ ಜರ್ನಿ ಆರಂಭಿಸುತ್ತಿದ್ದೇನೆ. ನವೆಂಬರ್‌ನಲ್ಲಿ ನನ್ನ ಹೊಸ ಸಿನಿಮಾ ೋಷಣೆಯಾಗಲಿದೆ. ಸದ್ಯ ಮಾತುಕತೆ ಹಂತದಲ್ಲಿದೆ. ಹೀಗಾಗಿ ಈ ದಸರಾ ವಿಶೇಷವಾಗಲಿದೆ’ ಎನ್ನುತ್ತಾರೆ. ಅಲ್ಲದೇ, ಕಾರುಣ್ಯ, ‘ಸಂಸ್ಕಾರ್’ ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.