

ಬೆಂಗಳೂರು: ದಕ್ಷಿಣ ಭಾರತದ ಸಿನಿಮಾರಂಗದ ದಿಗ್ಗಜ ಕಲಾವಿದರೆಲ್ಲ ವರ್ಷಕ್ಕೊಂದು ಬಾರಿ ಒಂದೆಡೆ ಸೇರಿ ಹಳೇ ದಿನಗಳನ್ನು ಮೆಲುಕು ಹಾಕುವುದು ಇಲ್ಲಿಯವರೆಗೂ ನಡೆದುಕೊಂಡು ಬಂದ ಸಂಪ್ರದಾಯ. ಸಿನಿಮಾ ಅನುಭವದ ಜತೆಗೆ ಕುಟುಂಬ, ವೃತ್ತಿ ಬದುಕು ಸೇರಿ ಸಂತಸದ ಕ್ಷಣಗಳೆಲ್ಲವೂ ಅಲ್ಲಿ ಮಾತಾಗಿ ಬರುತ್ತವೆ.
ಕೊನೆಗೆ ಒಂದು ಗ್ರೂಪ್ ಫೋಟೋಗೆ ಪೋಸ್ ಕೊಟ್ಟು, ಆ ದಿನವನ್ನು ಶಾಶ್ವತವಾಗಿ ಸ್ಮರಣೀಯವಾಗಿಸಿಕೊಳ್ಳುತ್ತಾರೆ. ಇದೀಗ ಸ್ಯಾಂಡಲ್ವುಡ್ನಲ್ಲಿ ಅಂಥದ್ದೇ ಒಂದು ಪ್ರಯತ್ನವನ್ನು ನಟಿ ತಾರಾ ಅನುರಾಧಾ ಮಾಡಿದ್ದಾರೆ. ಅಂಥ ಒಂದು ಕಾರ್ಯಕ್ಕೆ ವೇದಿಕೆ ಒದಗಿಸಿಕೊಟ್ಟಿದ್ದು ಅವರ ಜನ್ಮದಿನ.
ಮಾರ್ಚ್ 4, ನಟಿ ತಾರಾ ಜನ್ಮದಿನ. ಆ ದಿನವನ್ನು ಮತ್ತಷ್ಟು ಸ್ಮರಣೀಯವಾಗಿಸಬೇಕೆಂಬ ನಿಟ್ಟಿನಲ್ಲಿ, ಕಳೆದ ಹಲವು ದಶಕಗಳಿಂದ ಕನ್ನಡ ಸಿನಿಮಾರಂಗದಲ್ಲಿ ಕೆಲಸ ಮಾಡಿದ ಹಿರಿಕಿರಿ ಕಲಾವಿದೆಯರನ್ನೆಲ್ಲ ಒಂದೆಡೆ ಸೇರಿಸುವ ಕೆಲಸ ಅವರಿಂದಾಗಿತ್ತು. ಹಿರಿಯ ನಟಿ ಬಿ. ಸರೋಜಾ ದೇವಿ, ಸುಮಿತ್ರಾ, ಭಾರತಿ, ವಿನಯಾ ಪ್ರಸಾದ್, ಗಿರಿಜಾ ಲೋಕೇಶ್, ಶೈಲಶ್ರೀ, ಹೇಮಾ ಚೌಧರಿ, ತ್ರಿವೇಣಿ, ವಿಜಯಲಕ್ಷ್ಮೀ ಸಿಂಗ್, ಶ್ರುತಿ, ಸುಧಾರಾಣಿ, ಅನು ಪ್ರಭಾಕರ್, ಸುಧಾ ನರಸಿಂಹರಾಜು, ‘ಸ್ಪರ್ಶ’ ರೇಖಾ, ಕೀರ್ತಿ ಅನಿರುದ್ಧ್, ಪೂಜಾ ಲೋಕೇಶ್ ಜನ್ಮದಿನದ ನೆಪದಲ್ಲಿ ಒಂದೆಡೆ ಸೇರಿದ್ದರು.
‘ಕಳೆದ ಹಲವು ತಿಂಗಳ ಹಿಂದೆಯೇ ಈ ಯೋಚನೆ ಹೊಳೆದಿತ್ತು. ಶ್ರುತಿ, ಸುಧಾರಾಣಿ ಜತೆಗೆ ಬಿಡುವಿದ್ದಾಗ ಒಬ್ಬೊಬ್ಬರ ಮನೆಗೆ ಹೋಗಿ ಕೆಲಹೊತ್ತು ಸಮಯ ಕಳೆದು ಬರುವ ಪ್ಲಾನ್ ಆಗಿತ್ತು. ಅದೇ ರೀತಿ ಸರೋಜಾದೇವಿ ಅಮ್ಮನ ಮನೆಗೆ ಭೇಟಿ ಕೊಟ್ಟಿದ್ದೆವು. ಬರ್ತ್ಡೇ ಹತ್ತಿರ ಬರುತ್ತಿದ್ದಂತೆ ಎಲ್ಲರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಮಾಡುವುದಾಗಿ ವೇಣು ಬಳಿ ಹೇಳಿದ್ದೆ. ಅವರೇ ಎಲ್ಲ ವ್ಯವಸ್ಥೆ ಮಾಡಿಕೊಟ್ಟರು. ಖುಷಿಯಲ್ಲಿ ಸಂಭ್ರಮಿಸಿದ್ದು ಹಿತವೆನಿಸಿತು’ ಎಂದು ಆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ ತಾರಾ ಅನುರಾಧಾ.